ಮಹಾನ್ ಸಮಾಜ ಸುಧಾರಕ, ಆದರ್ಶವಾದಿ ಶ್ರೀ ನಾರಾಯಣ ಗುರುಗಳ ಆದರ್ಶ, ತತ್ವ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಶಾಸಕ ಎ.ಎಸ್. ಪೊನ್ನಣ್ಣ ಕರೆ ನೀಡಿದರು.
ಸಿದ್ದಾಪುರ: ಮಹಾನ್ ಸಮಾಜ ಸುಧಾರಕ, ಆದರ್ಶವಾದಿ ಶ್ರೀ ನಾರಾಯಣ ಗುರುಗಳ ಆದರ್ಶ, ತತ್ವ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಶಾಸಕ ಎ.ಎಸ್. ಪೊನ್ನಣ್ಣ ಕರೆ ನೀಡಿದರು.
ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಎಸ್‌ಎನ್‌ಡಿಪಿ ಯೂನಿಯನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾರಾಯಣ ಗುರುಗಳು ಪ್ರತಿಪಾದಿಸಿದ ಆದರ್ಶ, ತತ್ವ ಹಾಗೂ ಸಿದ್ಧಾಂತಗಳು ಶಾಶ್ವತವಾಗಿವೆ. ನಾವು ಹುಟ್ಟಿದ ಜಾತಿ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಆದರೆ ಅದು ಸಮಾಜಕ್ಕೆ ಮಾರಕವಾಗಬಾರದು ಎಂದು ಕರೆ ನೀಡಿದರು.
ಶೋಷಿತರ ವರ್ಗದ ಧ್ವನಿ: ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನಾರಾಯಣ ಗುರುಗಳು ಮಹಾನ್ ಸಮಾಜ ಸುಧಾರಕರಾಗಿದ್ದು, ಜಾತಿ, ಮತ, ವರ್ಗಗಳ ಭೇದವಿಲ್ಲದ ಸಮಾಜ ನಿರ್ಮಾಣದ ಸಂದೇಶ ಸಾರಿದ್ದರು. ಶಿಕ್ಷಣ ಮತ್ತು ಜ್ಞಾನದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ ಎಂಬುದನ್ನು ಪ್ರತಿಪಾದಿಸಿದ್ದರು ಎಂದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್, ಒಕ್ಕಲಿಗ ಸಮಾಜದ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ಎಡಿಕೇರಿ ಪ್ರಸನ್ನ, ಕೊಡಗು ಮಾಲಯಾಳಿ ಸಂಘದ ಅಧ್ಯಕ್ಷ ವಿಜಯನ್ ಮಾತನಾಡಿದರು.
ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ಪಿ.ವಿ.ಕೆ. ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 1903ರಲ್ಲಿ ಆರಂಭಗೊಂಡ ಸಂಘಟನೆ 1954ರಲ್ಲಿ ಸಿದ್ದಾಪುರಕ್ಕೆ ಪಾದಾರ್ಪಣೆ ಮಾಡಿತು. ಸಂಘಟನೆಯ 51 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಸನ್ಮಾನ: ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜದ ಸದಸ್ಯರು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಎಸ್‌ಎನ್‌ಡಿಪಿ ಯೂನಿಯನ್ ಪದಾಧಿಕಾರಿಗಳು, ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಶಾಖೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಮೆರುಗು ನೀಡಿದ ಮೆರವಣಿಗೆ: ಶ್ರೀನಾರಾಯಣ ಗುರುಗಳ 172 ನೇ ಜಯಂತಿ ಕಾರ್ಯಕ್ರಮದ ಅಂಗವವಾಗಿ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಕೇರಳದ ಚಂಡೆ ವಾದ್ಯ ಮೇಳ, ಕರ್ನಾಟಕದ ಡೊಳ್ಳುಕುಣಿತದೊಂದಿಗೆ ಜಿಲ್ಲೆಯ ವಿವಿಧ ಶಾಖೆಗಳಿಂದ ಕೇರಳದ ಸಂಸ್ಕೃತಿ ಸಾರುವ ಶೈಲಿಯ ಉಡುಗೆ ತೊಟ್ಟ ಮಹಿಳೆಯರು ,ಪುರುಷರು ಸಿದ್ದಾಪುರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತೆರಳಿ ಸಾಂಸ್ಕೃತಿಕ ಮೆರುಗನ್ನು ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.