ಪತ್ರಕರ್ತರು ಪ್ರಕಟಿಸುವ ಸುದ್ದಿಯ ಬಗ್ಗೆ ಅಸಮಾಧಾನವಿದ್ದರೆ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪ್ರತಿಕ್ರಿಯಿಸಬೇಕು. ಪತ್ರಕರ್ತರ ಮೇಲೆ ಹಲ್ಲೆ, ಬೆದರಿಕೆ ಅಥವಾ ದಬ್ಬಾಳಿಕೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.

ಕುಂದಾಪುರ: ಪತ್ರಕರ್ತರು ಪ್ರಕಟಿಸುವ ಸುದ್ದಿಯ ಬಗ್ಗೆ ಅಸಮಾಧಾನವಿದ್ದರೆ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪ್ರತಿಕ್ರಿಯಿಸಬೇಕು. ಪತ್ರಕರ್ತರ ಮೇಲೆ ಹಲ್ಲೆ, ಬೆದರಿಕೆ ಅಥವಾ ದಬ್ಬಾಳಿಕೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ನಗರದ ಶಾಸ್ತ್ರಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯ ಉಳಿಯಬೇಕು ಮತ್ತು ಪ್ರಜಾಪ್ರಭುತ್ವ ಜೀವಂತವಾಗಿರಬೇಕು. ಇಷ್ಟವಾಗದ ಸುದ್ದಿ ಪ್ರಕಟಿಸಿದ ಕಾರಣಕ್ಕೆ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.

ಖರ್ಗೆ ಬಿಜೆಪಿಗರ ರಾಜಕೀಯ ವಿರೋಧಿಯಾಗಿರಬಹುದು. ಅವರ ವಿಚಾರಧಾರೆಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರೋಧಿಸಬಹುದು. ಆದರೆ ಅವರು ಭಾಷಣ ಮಾಡಿದ ಸ್ಥಳವನ್ನೇ ಶುದ್ಧೀಕರಿಸುವ ಮೂಲಕ ಅವಮಾನಿಸುವುದು ಯಾವ ರೀತಿಯ ರಾಜಕೀಯ ಸಂಸ್ಕೃತಿ ಎಂದು ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಮಂಜುನಾಥ ಗಿಳಿಯಾರ್, ರಾಜು ಬೆಟ್ಟಿನಮನೆ, ಜಗದೀಶ್ ಗಂಗೊಳ್ಳಿ, ಗಣೇಶ್ ಕೊರಗ, ಅಶ್ವಥ್ ಕುಮಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಿನೋದ್ ಕ್ರಾಸ್ತ, ದೇವಕಿ ಸಣ್ಣಯ್ಯ, ಆಶಾ ಕರ್ವಾಲೋ, ಜ್ಯೋತಿ ಪುತ್ರನ್, ಇಚ್ಚಿತಾರ್ಥ್ ಶೆಟ್ಟಿ, ರೋಶನ್ ಶೆಟ್ಟಿ, ಅಶ್ವಥ್ ಶೆಟ್ಟಿ, ನಾಗೇಂದ್ರ, ಪುರಸಭೆ, ಗ್ರಾಪಂ ಮಾಜಿ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನೆ ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಮಿನಿ ವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ್ ಗ್ರೇಡ್ -2 ವಸಂತ್ ಅವರಿಗೆ ಮನವಿ‌ ನೀಡಿದರು.