ಗದಗ: ಬಡ ಕುಟುಂಬದಲ್ಲಿ ಜನಿಸಿ ಹಲವಾರು ಕಷ್ಟ-ನಷ್ಟಗಳನ್ನು ಅನುಭವಿಸಿ ವಿಜ್ಞಾನದಲ್ಲಿ ಅದ್ವಿತೀಯ ಸಾಧನೆ ಮಾಡಿ ಈ ದೇಶಕ್ಕೆ ಅಮೋಘ ಸೇವೆ ಸಲ್ಲಿಸಿದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಹೇಳಿದರು.
ಕಲಾಂ ಯುಥ್ ಫೆಡರೇಶನ್ ಸಂಸ್ಥಾಪಕ ಅಮೃತ ಮಂಟೂರು ಮಾತನಾಡಿ, ವಿಶ್ವ ಕಂಡ ಅಪ್ರತಿಮ ನಾಯಕರಾಗಿದ್ದ ಕಲಾಂ ಅವರ ಶೈಕ್ಷಣಿಕ, ಬೌದ್ಧಿಕ ಮತ್ತು ಧಾರ್ಮಿಕ ತತ್ವ-ಸಿದ್ಧಾಂತಗಳು ಇಂದಿನ ಯುವಕರಿಗೆ ಆದರ್ಶಗಳಾಗಿವೆ. ಅವರು ಬಾಲ್ಯದಲ್ಲಿ ದಿನಪತ್ರಿಕೆ ಮನೆ ಮನೆಗೆ ವಿತರಿಸಿದ ಶ್ರಮಜೀವಿಗಳಾಗಿದ್ದರು. ತ್ಯಾಗ ಮನೋಭಾವನೆಯುಳ್ಳ ಅವರು ಎಂದೆಂದಿಗೂ ಚಿರಸ್ಮರಣಿಯವಾಗಿದೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನರ ಮಾತನಾಡಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೯೮ ಅಂಕ ಗಳಿಸಿದ ಪ್ರಕಾಶ ಪಾಪನಾಶಿ ಅವರನ್ನು ಸನ್ಮಾನಿಸಲಾಯಿತು. ೧೪ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಿ, ಅಂಗನವಾಡಿ ಮಕ್ಕಳಿಗೆ ಪಾಟಿ, ಕಲಾಂ ಅವರ ಜೀವನ ಚರಿತ್ರೆ ಪುಸ್ತಕಗಳನ್ನು ನೀಡಲಾಯಿತು. ಜಿಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಗ್ರಾಪಂ ಸದಸ್ಯರಾದ ಪೀರಸಾಬ ನದಾಫ, ಫಕ್ಕೀರಮ್ಮ ಬೇಲೇರಿ, ರಾಚಪ್ಪ ನಾಲ್ವಡದ, ಮರಿಯಪ್ಪ ವಡ್ಡರ, ಅಂದಾನಯ್ಯ ಮುನವಳ್ಳಿಮಠ, ಹುಸೇನಸಾಬ ಕದಾಂಪುರ, ಬಸವರಾಜ ಪಾಪನಾಶಿ ಉಪಸ್ಥಿತರಿದ್ದರು. ಪಿಡಿಒ ಅಮೀರನಾಯಕ ಸ್ವಾಗತಿಸಿದರು. ನಮಿತಾ ವಿನೋದ ಕಲಾಲ ಕಾರ್ಯಕ್ರಮ ನಿರೂಪಿಸಿದರು. ಮಲ್ಲಮ್ಮ ಯಲಿಶಿರುಂದ ವಂದಿಸಿದರು.