ಚಿಕ್ಕಮಗಳೂರು : ಹಸುಗಳ ಕಾಲು, ಬಾಲ, ತೊಡೆ ಭಾಗವನ್ನು ಕಿಡಿಗೇಡಿಗಳು ಕತ್ತರಿಸಿ ಕ್ರೌರ್ಯ ಮೆರೆದಿರುವ ಅಮಾನುಷ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಂದುವಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಹಸುಗಳು ತೋಟದ ತಂತಿ ಬೇಲಿ ದಾಟುವಾಗ ಮತ್ತು ಪರಸ್ಪರ ಕಾದಾಟದ ವೇಳೆ ಈ ರೀತಿ ಗಾಯ ಆಗಿರಬಹುದು. ಮನುಷ್ಯರು ಆಯುಧ ಬಳಸಿ ಗಾಯಗೊಳಿಸಿದ ಬಗ್ಗೆ ಯಾವುದೇ ಕುರುಹು ಕಾಣಿಸಿಲ್ಲ ಎಂದು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ಸ್ಪಷ್ಟನೆ ನೀಡಿದ್ದಾರೆ.
3 ಹಸುಗಳ ಹಿಂಭಾಗದ ಕಾಲು, ತೊಡೆ, ಬಾಲಕ್ಕೆ ಕತ್ತಿಯಿಂದ ಗಾಯ
ಚಂದುವಳ್ಳಿ ಗ್ರಾಮದಲ್ಲಿ ಸುಮಾರು 100ಕ್ಕೂ ಅಧಿಕ ಬೀಡಾಡಿ ಹಸುಗಳಿವೆ. ಈ ಪೈಕಿ 3 ಹಸುಗಳ ಹಿಂಭಾಗದ ಕಾಲು, ತೊಡೆ, ಬಾಲಕ್ಕೆ ಕತ್ತಿಯಿಂದ ಗಾಯಗೊಳಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದಿನದಿಂದ ದಿನಕ್ಕೆ ಹಸುಗಳ ಗಾಯ ಉಲ್ಬಣಿಸುತ್ತಿದ್ದು, ಮಳೆಯ ನೀರಿನೊಂದಿಗೆ ರಕ್ತಸ್ರಾವ ಹೆಚ್ಚಾಗಿದೆ. ದನಗಳ್ಳರು ಬೀಡಾಡಿ ದನಗಳನ್ನು ಕದಿಯುವುದಕ್ಕೆ ಸುಲಭವಾಗಲಿ ಎಂಬ ಕಾರಣಕ್ಕೆ ಈ ರೀತಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು,ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುಪಾಲನೆ ಇಲಾಖೆಯ ಆ್ಯಂಬುಲೆನ್ಸ್ ತೆಗೆದುಕೊಂಡು ಹೋಗಿ, ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಗಿದೆ. ಆದರೆ, ಬೀಡಾಡಿ ಹಸುಗಳನ್ನು ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ 1 ವಾರದ ಹಿಂದೆ ಈ ಘಟನೆ ನಡೆದಿದೆ. ಚಂದುವಳ್ಳಿಯಲ್ಲಿ ಸುಮಾರು 100ಕ್ಕೂ ಅಧಿಕ ಬೀಡಾಡಿ ಹಸುಗಳಿದ್ದು, ಬಹುತೇಕ ಹಸುಗಳು ತೋಟಗಳಲ್ಲಿ ಇರಲಿವೆ. ಮಳೆ ಹಿನ್ನೆಲೆಯಲ್ಲಿ ಒಣಗಿದ ಜಾಗ ಹುಡುಕಿಕೊಂಡು ಬಂದಿವೆ. ತೋಟದ ತಂತಿ ಬೇಲಿ ದಾಟುವಾಗ ಹಾಗೂ ಪರಸ್ಪರ ಕಾಡಾಟದಲ್ಲಿ ಈ ಗಾಯ ಸಂಭವಿಸಿದೆ. ಮನುಷ್ಯರು ಆಯುಧ ಬಳಸಿ ಗಾಯಗೊಳಿಸಿದ ಬಗ್ಗೆ ಯಾವುದೇ ಕುರುಹು ಕಾಣಿಸಿಲ್ಲ.
