ಕನ್ನಡಪ್ರಭ ವಾರ್ತೆ, ತರೀಕೆರೆ
ತಾಲೂಕಿನ ನಂದಿಬಟ್ಟಲು, ತಣಿಗೆಬೈಲು, ಹುಣಸೆಬೈಲು, ಜೈಪುರ, ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ತೆಂಗು ಅಡಕೆ ಮಾವು, ಹಲಸು, ಕಾಫಿ, ಕಾಳು ಮೆಣಸು ಮುಂತಾದ ತೋಟದ ಬೆಳೆಗಳನ್ನು ಕಾಡಾನೆಗಳು ತಿಂದು , ತುಳಿದು, ಮುರಿದು ಹಾಕುತ್ತಿರುವುದರಿಂದ ಈ ಭಾಗದ ತೋಟದ ಬೆಳೆಗಳ ಬೆಳೆಗಾರರುಗಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗುತ್ತಿದೆ ಎಂದು ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ ತಿಳಿಸಿದರು.ಭದ್ರ ಅಭಯಾರಣ್ಯ , ತಣಿಗೆಬೈಲು ವಲಯದ ಕಾಡಾನೆಗಳ ಜೊತೆಗೆ ಬೇರೆ ಬೇರೆ ಸ್ಥಳಗಳಲ್ಲಿ, ರೈತರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ತಂದು ತಣಿಗೆಬೈಲು ಅಭಯಾರಣ್ಯಕ್ಕೆ ಅರಣ್ಯ ಇಲಾಖೆ ಬಿಡುತ್ತಿದೆ. ಈ ಪುಂಡಾನೆಗಳು ಅಭಯಾರಣ್ಯದಿಂದ ಹೊರ ಬಂದು ರೈತರ ಜಮೀನುಗಳಿಗೆ ದಾಳಿ ಮಾಡುತ್ತಿರುವುದಲ್ಲದೇ ರೈತರು ಹತ್ತಾರು ವರ್ಷಗಳಿಂದ ತಮ್ಮ ಮಕ್ಕಳಂತೆ ಬೆಳೆಸಿರುವ ತೋಟದ ಬೆಳೆಗಳು, ತಮ್ಮ ಕಣ್ಣ ಮುಂದೆಯೇ ನಾಶವಾಗುತ್ತಿರುವುದನ್ನು ಕಂಡು ಅಸಾಯಕತೆಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ ಎಂದರು.
ಲಿಂಗದಹಳ್ಳಿ ಹೋಬಳಿಯಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಾಗಿದ್ದು, ಬ್ಯಾಂಕು, ಸಹಕಾರ ಸಂಘ ಇನ್ನಿತರ ಕಡೆಗಳಿಂದ ಸಾಲ ಪಡೆದು ತೋಟದ ಬೆಳೆ ಬೆಳೆದಿದ್ದಾರೆ. ಫಸಲು ಬಿಡುತ್ತಿರುವ ಅಡಕೆ ತೆಂಗು, ಮಾವು, ಕಾಫಿ ಮುಂತಾದ ಬೆಳೆಗಳ ನಷ್ಟದಿಂದ, ರೈತರಿಗೆ ಸಂಕಷ್ಟ ಉಂಟಾಗಿದೆ. ಗಾಯದ ಮೇಲೆ ಬರೆ ಎಳೆದಂತಾದ ಕಾರಣ ಸಂಬಂಧ ಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಭದ್ರ ಅಭಯಾರಣ್ಯದ ಸುತ್ತಲು ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಕಾಡು ಪ್ರಾಣಿಗಳ ದಾಳಿ ತಡೆಗಟ್ಟುವಂತೆ ಒತ್ತಾಯಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ನಂದಿಬಟ್ಟಲು ಗ್ರಾಮದ ಸರಸಮ್ಮ, ಮಂಜಪ್ಪ, ಎಂಬುವವರಿಗೆ ಸೇರಿರುವ ಸರ್ವೆ ನಂ. 103 ರಲ್ಲಿರುವ ಜಮೀನಿನಲ್ಲಿ ಫಸಲು ಬಿಡುತ್ತಿದ್ದ ತೆಂಗಿನ ಮರವನ್ನು ಬುಡ ಸಮೇತ ನೆರಕ್ಕುಳಿಸಿವೆ. ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾದ ಎಂದು ರೈತರಾದ ಸರಸಮ್ಮ, ಮಂಜಪ್ಪ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಇಲಾಖಾ ವತಿಯಿಂದ ಸೂಕ್ತ ಬೆಳೆ ಪರಿಹಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ. 3ಕೆಟಿಆರ್.ಕೆ.5ಃ ತರೀಕೆರೆ ತಾಲೂಕಿನ ನಂದಿಬಟ್ಟಲು ಗ್ರಾಮದ ಸರಸಮ್ಮ, ಮಂಜಪ್ಪ ಅವರು ಬೆಳೆದಿದ್ದ ತೆಂಗಿನ ಸಸಿಯನ್ನು ಬುಡಸಮೇತ ನೆಲಕ್ಕುರುಳಿಸಿರುವ ಕಾಡಾನೆಗಳು.