ಈಗಾಗಲೇ ರಾಜ್ಯದ ವಿವಿಧಡೆ ಆರಂಭಗೊಂಡಿರುವ ಮಲತ್ಯಾಜ್ಯ ಸಂಸ್ಕರಣ ಘಟಕಗಳು ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ಅರ್ಧಕ್ಕೆ ಸ್ಥಗಿತಗೊಂಡಿರುವ ಉದಾಹರಣೆಗಳಿವೆ. ಆದರೆ, ಈ ಘಟಕವನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಘಟಕವನ್ನಾಗಿ ಮಾಡಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಾಗಶೆಟ್ಟಹಳ್ಳಿ ಹೊರವಲಯದಲ್ಲಿ ನಿರ್ಮಿಸಿರುವ ಮಲತ್ಯಾಜ್ಯ ಸಂಸ್ಕರಣ ಘಟಕವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಪಂ ಸಿಇಒ ಕೆ.ಆರ್.ನಂದಿನಿ ಉದ್ಘಾಟಿಸಿದರು.ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ, ತಾಪಂ ಹಾಗೂ ಕೆ.ಬೆಟ್ಟಹಳ್ಳಿ ಗ್ರಾಪಂ ಸಹಯೋಗದಲ್ಲಿ ಘಟಕವನ್ನು ಉದ್ಘಾಟಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಅದರಿಂದ ಸಾವಯವ ಗೊಬ್ಬರ ತಯಾರು ಮಾಡಬೇಕು ಎಂಬ ಉದ್ದೇಶದಿಂದ ಘಟಕ ನಿರ್ಮಾಣ ಮಾಡಿದ್ದೇವೆ. ಈ ಘಟಕ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಅಧಿಕಾರಿಗಳು ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದರು.
ಮಲತ್ಯಾಜ್ಯ ಸಂಸ್ಕರಣ ಘಟಕದಿಂದ ಸ್ವಚ್ಛತೆಯ ಜೊತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿಕೊಟ್ಟಂತಾಗುತ್ತದೆ. ಜತೆಗೆ ನಮ್ಮ ತಾಲೂಕನ್ನು ಸಾವಯವ ತಾಲೂಕು ಎಂಬುದಾಗಿ ಘೋಷಣೆಯಾಗಿರುವುದರಿಂದ ಗೊಬ್ಬರಕ್ಕೂ ಅನುಕೂಲವಾಗಲಿ ಎಂದರು.ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ತಾಲೂಕಿನಲ್ಲಿ ನೂತನವಾಗಿ ಆರಂಭಗೊಂಡಿರುವ ಮಲತ್ಯಾಜ್ಯ ಸಂಸ್ಕರಣ ಘಟಕವನ್ನು ವೈಜ್ಞಾನಿಕವಾಗಿ, ನಿಯಮಿತವಾಗಿ ನಿರ್ವಹಣೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ರಾಜ್ಯದ ವಿವಿಧಡೆ ಆರಂಭಗೊಂಡಿರುವ ಮಲತ್ಯಾಜ್ಯ ಸಂಸ್ಕರಣ ಘಟಕಗಳು ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ಅರ್ಧಕ್ಕೆ ಸ್ಥಗಿತಗೊಂಡಿರುವ ಉದಾಹರಣೆಗಳಿವೆ. ಆದರೆ, ಈ ಘಟಕವನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಘಟಕವನ್ನಾಗಿ ಮಾಡಬೇಕು ಎಂದರು.ಮಲದಲ್ಲಿ ಇರುವ ಬ್ಯಾಕ್ಟೀರಿಯಾಗಳು ಮನುಷ್ಯದ ದೇಹಕ್ಕೆ ಸೇರಿದರೆ ಹಲವು ಅನಾರೋಗ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ಮಲವನ್ನು ಒಂದೆಡೆ ಸಂಗ್ರಹಿಸಿ ಸಂಸ್ಕರಣ ಮಾಡಲಾಗುತ್ತದೆ ಎಂದರು.
ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಮಲತ್ಯಾಜ್ಯ ಸಂಗ್ರಹಣೆ ಮಾಡುವ ಖಾಸಗಿ ವ್ಯಕ್ತಿಗಳ ದೂರವಾಣಿ ನಂಬರ್‌ಗಳನ್ನು ಸಂಗ್ರಹಿಸಿ ಎಲ್ಲಾ ಘಟಕ ಸಕ್ಕಿಂಗ್ ಯಂತ್ರದ ಮೂಲಕ ಸಂಗ್ರಹಿಸುವ ಮಲವನ್ನು ಸಂಸ್ಕರಣ ಘಟಕಕ್ಕೆ ನೀಡಲು ಮನವರಿಕೆ ಮಾಡಬೇಕು. ಸಂಸ್ಕರಣ ಘಟಕದಲ್ಲೂ ಸಹ ಸುರಕ್ಷಿತವಾಗಿ ನಿಯಮಗಳ ಮೂಲಕ ಮಲವನ್ನು ಸಂಸ್ಕರಣೆ ಮಾಡಬೇಕು. ಇದಕ್ಕೆ ಸಾರ್ವಜನಿಕರ ಸಹಕಾರವು ಅತ್ಯಗತ್ಯವಾಗಿ ಬೇಕು ಎಂದು ಮನವಿ ಮಾಡಿದರು.ಈ ವೇಳೆ ತಾಪಂ ಇಓ ವೀಣಾ, ಕೆಆರ್‌ಐಡಿಎಲ್ ಎಂಜಿನಿಯರ್ ಸೋಮಶೇಖರ, ಅಭಿವೃದ್ಧಿ ಯೋಜನಾಧಿಕಾರಿ ಸುಂದರ್‌ರಾಜು, ಎಇಇ ಚೈತ್ರ, ತಾಪಂ ವ್ಯವಸ್ಥಾಪಕ ಮಂಜುನಾಥ್, ನರೇಗಾ ಸಹಾಯಕ ನಿರ್ದೇಶಕ ರಮೇಶ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಸ್ವಚ್ಛ ಭಾರತ್ ಮಿಷನ್ ಯೋಜನೆ ಜಿಲ್ಲಾ ಸಂಯೋಜಕರಾದ ಶಿವಕುಮಾರ್, ಜಯದೇವ್, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಸಿಬ್ಬಂದಿ, ನರೇಗಾ ಮತ್ತು ವಸತಿ ಯೋಜನೆ ಸಿಬ್ಬಂದಿ, ಪಿಡಿಒಗಳು, ಕಾರ್ಯದರ್ಶಿಗಳು, ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಮುಖಂಡರು ಹಾಜರಿದ್ದರು.