ಸತತ 12 ಗಂಟೆ ಕಾಲ ಏಕಾಂಗಿಯಾಗಿ ಕಡು ಕತ್ತಲೆ, ಮಳೆಯಲ್ಲಿ ಇಡೀ ರಾತ್ರಿ ಕಳೆದ ಒಂದೂವರೆ ವರ್ಷದ ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಮಾಡಿ ಸಂರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆ ವ್ಯಾಪ್ತಿ ನಡೆದಿದೆ.

ಕೊಟ್ಟಿಗೆಹಾರ (ಚಿಕ್ಕಮಗಳೂರು) : ಸತತ 12 ಗಂಟೆ ಕಾಲ ಏಕಾಂಗಿಯಾಗಿ ಕಡು ಕತ್ತಲೆ, ಮಳೆಯಲ್ಲಿ ಇಡೀ ರಾತ್ರಿ ಕಳೆದ ಒಂದೂವರೆ ವರ್ಷದ ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಮಾಡಿ ಸಂರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆ ವ್ಯಾಪ್ತಿ ನಡೆದಿದೆ.

ಸಂಜೆ 5 ಗಂಟೆ ಸುಮಾರಿಗೆ ಕಾಣೆಯಾಗಿದ್ದ ಮಗು

ಮಧ್ಯಪ್ರದೇಶದ ಭೋಪಾಲ್ ಮೂಲದ ಗೋನು ಹಾಗೂ ಸೋನಾ ದಂಪತಿ ಮೂರು ದಿನಗಳ ಹಿಂದೆ ಕೆಲಸಕ್ಕಾಗಿ ಕೆಳಗೂರು ಟೀ ಎಸ್ಟೇಟ್‌ಗೆ ಬಂದಿದ್ದರು. ಇವರ ಮಗ ಒಂದೂವರೆ ವರ್ಷದ ಶಿವಂ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಕಾಣೆಯಾಗಿದ್ದನು. ಹುಡುಕಾಟ ನಡೆಸಿದ ಫೋಷಕರು ಬಾಳೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು, ಎಸ್ಟೇಟ್‌ ಸಿಬ್ಬಂದಿ, ಪೋಷಕರು ಗುರುವಾರ ತಡ ರಾತ್ರಿ ವರೆಗೆ ಹುಡುಕಾಟ ನಡೆಸಿದ್ದರು. ಆದರೂ ಮಗು ಪತ್ತೆಯಾಗಿರಲಿಲ್ಲ.

ಡಾಗ್‌ ಸ್ಕ್ವಾಡ್‌ ಹಾಗೂ ಥರ್ಮಲ್‌ ಡ್ರೋನ್‌ ಬಳಸಿ ಕಾರ್ಯಾಚರಣೆ

ಶುಕ್ರವಾರ ಬೆಳಗ್ಗೆ ಡಾಗ್‌ ಸ್ಕ್ವಾಡ್‌ ಹಾಗೂ ಥರ್ಮಲ್‌ ಡ್ರೋನ್‌ ಬಳಸಿ ಕಾರ್ಯಾಚರಣೆ ಮುಂದುವರಿಸಲಾಯಿತು. ಈ ವೇಳೆ ಮನೆಯಿಂದ ಸುಮಾರು 350 ಮೀಟರ್‌ ದೂರದಲ್ಲಿ ಇರುವ ಹಳ್ಳದಲ್ಲಿ ಮಗು ಪತ್ತೆಯಾಗಿದೆ. ಮಗುವನ್ನು ಫೋಷಕರಿಗೆ ನೀಡಲಾಗಿದೆ. ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್ ನೇತೃತ್ವದಲ್ಲಿ ತೀವ್ರ ಶೋಧ ನಡೆಸಿ, ಸುಮಾರು 12 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕಾಣೆಯಾಗಿದ್ದ ಶಿವಂನನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್, ದೂರು ಬಂದ ತಕ್ಷಣ ಹುಡುಕಾಟ ಆರಂಭಿಸಲಾಯಿತು. ಆದರೂ ಮಗು ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಯಿತು. ಫೋಷಕರು ವಾಸವಿದ್ದ, ಮನೆಯಿಂದ ಕೇವಲ 350 ಮೀ. ದೂರದ ಸುಮಾರು 9 ಅಡಿ ಹಳ್ಳದಲ್ಲಿ ಮಗು ಪತ್ತೆಯಾಗಿದೆ. ರಾತ್ರಿ ಇಡೀ ಮಗು ಏಕಾಂಗಿಯಾಗಿ ಹಳ್ಳದಲ್ಲಿತ್ತು. ಸುಮಾರು 150ಕ್ಕೂ ಅಧಿಕ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು ಎಂದು ಹೇಳಿದರು.