-ಭಾನುವಾರ ನಸುಕಲ್ಲಿ ಘಟನೆ । ಎಸಿ ಬ್ಲಾಸ್ಟ್ ಶಂಕೆ-ನೆಮ್ಮದಿ ನಿದ್ರೆ ಹೊತ್ತಿನಲ್ಲಿ 3 ಕುಟುಂಬ ಚಿರನಿದ್ರೆಗೆ-10-15 ಮಂದಿ ರಕ್ಷಣೆ, ಇಬ್ಬರಿಗೆ ಸಣ್ಣಪುಟ್ಟ ಗಾಯಪಿಟಿಐ ನವದೆಹಲಿ
4 ಮಹಡಿಯ ವಸತಿ ಸಮುಚ್ಚಯವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ, 1 ಮಗು ಸೇರಿದಂತೆ 9 ಮಂದಿ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಪೂರ್ವ ದೆಹಲಿಯ ವಿವೇಕ ವಿಹಾರದ ಹಂತ-1ರಲ್ಲಿ ಭಾನುವಾರ ನಸುಕಿನ 3.30 ಸುಮಾರಿಗೆ ನಡೆದಿದೆ.ಕಟ್ಟಡದ 2, 3 ಮತ್ತು 4ನೇ ಮಹಡಿಗಳು ಬೆಂಕಿಗಾಹುತಿಯಾಗಿವೆ. ಮೂರೂ ಮಹಡಿಗಳಲ್ಲಿ ವಾಸವಿದ್ದ 3 ಕುಟುಂಬಗಳು ನೆಮ್ಮದಿಯ ನಿದ್ರೆ ಮಾಡುವ ಹೊತ್ತಿನಲ್ಲಿ ಚಿರನಿದ್ರೆಗೆ ಜಾರಿವೆ. 10-15 ಜನರನ್ನು ಬೆಂಕಿಯ ಕೆನ್ನಾಲಗೆಯಿಂದ ಪಾರು ಮಾಡಲಾಗಿದ್ದು, ಸಣ್ಣಪುಟ್ಟ ಗಾಯಗಳಾದ ಇಬ್ಬರನ್ನು ಗುರು ತೇಗಬಹದ್ದೂರ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಎ.ಸಿ. ಸ್ಫೋಟವೇ ಕಾರಣ ಎಂದು ಈ ಕಟ್ಟಡದ ಪಕ್ಕದವರು ಶಂಕಿಸಿದ್ದಾರೆ. ಆದರೆ ಅಧಿಕೃತವಾಗಿ ಇದು ದೃಢಪಟ್ಟಿಲ್ಲ.ಆಗಿದ್ದೇನು?: ಭಾನುವಾರ ನಸುಕಿನ 3.48ರ ಸುಮಾರಿಗೆ ವಸತಿ ಸಮುಚ್ಚಯಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣದಲ್ಲಿ ಮೂರೂ ಮಹಡಿಗಳಿಗೆ ಜ್ವಾಲೆ ಆವರಿಸಿದೆ. ದಟ್ಟವಾದ ಹೊಗೆ ಸುತ್ತಲೂ ವ್ಯಾಪಿಸಿ, ಗೋಚರತೆಯೇ ಇಲ್ಲದಂತೆ ಮಾಡಿದೆ. ಘಟನೆ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ, ಬೆಂಕಿಗೆ ಸಿಲುಕಿದ್ದ ಜನ ಜೀವ ಉಳಿಸುವಂತೆ ಚೀರಿಕೊಳ್ಳುವುದು ಕೇಳಿಸುತ್ತಿತ್ತು. ಹರಸಾಹಸ ಪಟ್ಟು 10-15 ಜನರನ್ನು ರಕ್ಷಿಸಿದರಾದರೂ, 9 ಮಂದಿ ಅದಾಗಲೇ ಅಸುನೀಗಿದ್ದರು. ಅವರ ಶವಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಟೆರೇಸ್‌ಗೆ ಬೀಗ, ಒಂದೇ ಮೆಟ್ಟಿಲ ದಾರಿ:ಕಟ್ಟಡಕ್ಕೆ ತುರ್ತು ನಿರ್ಗಮನ ದ್ವಾರ ಇರಲಿಲ್ಲ. ಕೇವಲ ಒಂದು ಮೆಟ್ಟಿಲ ದಾರಿ ಮಾತ್ರ ಇತ್ತು. ಇಲ್ಲಿಂದಲೇ ಪ್ರವೇಶ ಮತ್ತು ನಿರ್ಗಮನ ಎರಡನ್ನೂ ಮಾಡಬೇಕಿತ್ತು. ಇಲ್ಲಿ ಬೆಂಕಿ ಆವರಿಸಿದ್ದರಿಂದ ಹೊರಬರಲು ಬೇರೆ ಮಾರ್ಗ ಇರಲಿಲ್ಲ. ಅಲ್ಲದೆ, ಟೆರೇಸ್‌ಗೆ ಹೋಗುವ ದಾರಿ ಕೂಡಾ ಲಾಕ್ ಆಗಿತ್ತು. ಕಿಟಕಿಗಳಿಗೆ ಕಬ್ಬಿಣದ ಗ್ರಿಲ್‌ಗಳನ್ನು ಹಾಕಲಾಗಿದ್ದರಿಂದ ಅಲ್ಲಿಂದಲೂ ಹೊರಜಿಗಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಬಹಳ ಅಡ್ಡಿಯಾಯಿತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬೆಂಕಿ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ, ಲೆ. ಗವರ್ನರ್ ತರಣ್‌ಜಿತ್ ಸಿಂಗ್ ಸಂಧು ಮತ್ತು ಮುಖ್ಯಮಂತ್ರಿ ರೇಖಾ ಗುಪ್ತಾ ಸಂತಾಪ ಸೂಚಿಸಿದ್ದಾರೆ.