ರಾಮನಗರ : ಆಕಸ್ಮಿಕ ಬೆಂಕಿ ಅವಘಡಕ್ಕೆ ಅವಕಾಶವಾಗದಂತೆ ಕಟ್ಟಡ ಮಾಲೀಕರು, ನಾಗರೀಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಬೇಕು. ಆಗ ಸಾವು-ನೋವು, ನಷ್ಟವನ್ನು ನಿಯಂತ್ರಿಸಬಹುದು ಎಂದು ರಾಮನಗರ ಅಗ್ನಿಶಾಮಕ ಠಾಣಾಧಿಕಾರಿ ಪ್ರೇಮಾನಂದ್ ಹೇಳಿದರು.

ನಗರದ ಶ್ರೀ ಕನ್ನಿಕಾಮಹಲ್‌ನಲ್ಲಿ ವಾಸವಿ ಕ್ಲಬ್ ರಾಮನಗರ ಆಯೋಜಿಸಿದ್ದ ಅಗ್ನಿ ಆಕಸ್ಮಿಕ ಸಂದರ್ಭಗಳಲ್ಲಿ ನಾಗರೀಕರು ವಹಿಸಬೇಕಾದ ಪಾತ್ರಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರು ಅರಿವು ಮೂಡಿಸಿದರು. ಅಗ್ನಿ ಆಕಸ್ಮಿಕ ಸಂದರ್ಭಗಳಲ್ಲಿ ಕಟ್ಟಡದ ನೆರೆಹೊರೆಯವರು, ನಾಗರೀಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಇದೇ ವೇಳೆ ಅಗ್ನಿ ಶಾಮಕ ದಳದ ಪ್ರಮುಖ ಅಗ್ನಿಶಾಮಕ ಮುತ್ತಣ್ಣ, ಅಗ್ನಿಶಾಮಕರಾದ ಎಂ.ಎಂ.ರಮೇಶ್ ಮತ್ತು ಮಹೇಶ್ ಪೂಜಾರಿ ಅವರು ಅಗ್ನಿ ನಂದಿಸುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಫೈರ್ ಎಕ್ಸಟಿಂಗ್ವಿಷರ್ ಮೂಲಕ ನಾಗರೀಕರೇ ಸ್ವತಃ ಬೆಂಕಿ ನಂದಿಸುವುದು ಹೇಗೆ ಎಂದು ತೋರಿಸಿಕೊಟ್ಟರು. ಇದೇ ಪೆಟ್ರೋಲ್, ಡೀಸಲ್ ಮುಂತಾದ ಘಟಕಗಳಿಗೆ ಅಗ್ನಿ ಅವಘಡ ಸಂಭವಿಸಿದರೆ ಫೋಮ್ ಮತ್ತು ನೀರು ಬಳಸಿ ಅಗ್ನಿಯನ್ನು ನಿಯಂತ್ರಿಸುವ ಬಗೆಯನ್ನು ವಿವರಿಸಿದರು.

ನೀರು ಹರಿಸುವ ಪೈಪ್ ಮತ್ತು ಹೋಸ್ ಪೈಪ್‌ನ ವಿವಿಧ ಕೆಲಸಗಳನ್ನು ನಾಗರೀಕರಿಗೆ ತೋರಿಸಿಕೊಟ್ಟರು. ಕೆಲವು ನಾಗರೀಕರು ವ್ಯಕ್ತಪಡಿಸಿದ ಅನುಮಾನಗಳಿಗೆ ಅವರು ಪರಿಹಾರವನ್ನು ಕೊಟ್ಟರು.

ಅಗ್ನಿ ಆಕಸ್ಮಿಕ ಸಂದರ್ಭಗಳಲ್ಲಿ ನಾಗರೀಕರು ಧೈರ್ಯಗುಂದದೆ, ಮೊದಲು ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ಕೊಡಬೇಕು. ಬಹುತೇಕ ಎಲ್ಲ ನಾಗರೀಕರು ಪ್ರಥಮ ಚಿಕಿತ್ಸೆಯ ತರಬೇತಿ ಪಡೆದಿದ್ದರು ದುರಂತಗಳು ಸಂಭವಿಸಿದಾಗ ನೆರವಿಗೆ ಬರುತ್ತದೆ ಎಂಬುದರ ಬಗ್ಗೆಯೂ ನಾಗರೀಕರು ಅರಿವು ಮೂಡಿಸಿಕೊಂಡರು.


ಪ್ರಾತ್ಯಕ್ಷಿಕೆ ಮತ್ತು ಅರಿವು ಮೂಡಿಸಿದ ಅಗ್ನಿ ಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾಸವಿ ಕ್ಲಬ್ ರಾಮನಗರದ ಅಧ್ಯಕ್ಷ ಕೆ.ಎನ್.ಗಿರೀಶ್, ಕಾರ್ಯದರ್ಶಿ ಹರ್ಷಿತಾ, ಖಜಾಂಚಿ ಅನುರಾಧ ಮುಂತಾದವರು ಕೃತಜ್ಞತೆ ಅರ್ಪಿಸಿದರು.

-------------------------------

30ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಶ್ರೀ ಕನ್ನಿಕಾಮಹಲ್‌ನಲ್ಲಿ ವಾಸವಿ ಕ್ಲಬ್ ರಾಮನಗರ ಆಯೋಜಿಸಿದ್ದ ಅಗ್ನಿ ಆಕಸ್ಮಿಕ ಸಂದರ್ಭಗಳಲ್ಲಿ ನಾಗರೀಕರು ವಹಿಸಬೇಕಾದ ಪಾತ್ರಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರು ಅರಿವು ಮೂಡಿಸಿದರು.

----------------------------