ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆ ಅರ್ಹತಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಖಾಸಗಿ ಮಾಹಿತಿ ಸೋರಿಕೆ ಮಾಡಿದ ಆರೋಪ ಮೇಲೆ ಕೆಪಿಎಸ್‌ಸಿಯ ಇಬ್ಬರು ಸಿಬ್ಬಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆ ಅರ್ಹತಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಖಾಸಗಿ ಮಾಹಿತಿ ಸೋರಿಕೆ ಮಾಡಿದ ಆರೋಪ ಮೇಲೆ ಕೆಪಿಎಸ್‌ಸಿಯ ಇಬ್ಬರು ಸಿಬ್ಬಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಪಿಎಸ್‌ಸಿ ತಾಂತ್ರಿಕ ಸಹಾಯಕ ಶರಣಪ್ಪ ಅಡವಳ್ಳಿ (55), ಹಿರಿಯ ಸಹಾಯಕ ಸ್ವಾಮಿದಾಸ್‌ (39) ಬಂಧಿತರು. ಕೆಪಿಎಸ್‌ಸಿ ಕಾರ್ಯದರ್ಶಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿಗೆ ಜಲಸಂಪನ್ಮೂಲ ಇಲಾಖೆ ಕಿರಿಯ ಎಂಜಿನಿಯರ್ ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು ಎಂಬ ಹೆಸರಿನಲ್ಲಿ ದೂರು ಸಲ್ಲಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿವರ:

ಎಂಜಿನಿಯರ್ (ಸಿವಿಲ್ ಮತ್ತು ಮೆಕ್ಯಾನಿಕಲ್) ಹುದ್ದೆಗಳಿಗೆ ಕೆಪಿಎಸ್‌ಸಿ ಕಳೆದ ವರ್ಷ ಮಾ.16ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಅದೇ ವರ್ಷ ಆ.16ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಿ, 2026 ರ ಜ.28 ರಂದು 1:3ರ ಅನುಪಾತದಲ್ಲಿ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಪ್ರಕಟಿಸಿ ಫೆ.20ರಿಂದ 26 ರವರೆಗೆ ಮೂಲ ದಾಖಲೆಗಳ ಪರಿಶೀಲನೆಗೆ ದಿನ ನಿಗದಿಪಡಿಸಲಾಗಿತ್ತು.

ಈ ಮಧ್ಯೆ, ಕೆಪಿಎಸ್‌ಸಿ ಕಾರ್ಯದರ್ಶಿಗೆ ''ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು'' ಎಂಬ ಹೆಸರಿನಲ್ಲಿ ದೂರು ಸಲ್ಲಿಕೆ ಆಗಿತ್ತು. ಆ ದೂರಿನಲ್ಲಿ ಹಲವು ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಡೆಯವರೆಂದು ಹೇಳಿಕೊಂಡು, ಉದ್ಯೋಗ ಕೊಡಿಸುವ ಭರವಸೆಯ ಕರೆಗಳು ಬರುತ್ತಿವೆ. ಅದರಲ್ಲಿ ಕೆಪಿಎಸ್‌ಸಿ ಒಳಗಿನವರು ಭಾಗಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದೂ ಉಲ್ಲೇಖಿಸಿದ್ದರು. ಅಲ್ಲದೆ, ಆನಂದ್ ಎಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿದ್ದ ಬಗ್ಗೆ ಕಾಲ್ ರೆಕಾರ್ಡ್ ಅನ್ನು ಕಾರ್ಯದರ್ಶಿಯ ಮೊಬೈಲ್ ಸಂಖ್ಯೆಗೆ ವಾಟ್ಸ್ಆ್ಯಪ್ ಮಾಡಿದ್ದರು. ಈ ದೂರಿನ ಸಹಿತ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ವಿಧಾನಸೌಧ ಠಾಣೆಗೆ ಫೆ.12ರಂದು ದೂರು ನೀಡಿದ್ದರು.

ದೂರಿನನ್ವಯ ಪ್ರಕರಣ

ದೂರಿನನ್ವಯ ಪ್ರಕರಣ ದಾಖಲಿಸಿ ಕೃಷ್ಣಮೂರ್ತಿ (40), ಲಿಂಗರಾಜು(42), ವಿಜಯ್‌ ಕುಮಾರ್‌(42) ಮತ್ತು ಸಣ್ಣ ತಿಮ್ಮಪ್ಪ (39) ಎಂಬುವರನ್ನು ಮಾ.8 ರಂದು ಬಂಧಿಸಲಾಗಿತ್ತು. ಇವರು ನೀಡಿದ ಮಾಹಿತಿ ಮೇರೆಗೆ ಕೆಪಿಎಸ್‌ಸಿ ತಾಂತ್ರಿಕ ಸಹಾಯಕ ಶರಣಪ್ಪ ಅಡವಳ್ಳಿ ಮತ್ತು ಹಿರಿಯ ಸಹಾಯಕ ಸ್ವಾಮಿದಾಸ್‌ನನ್ನು ಈಗ ಬಂಧಿಸಲಾಗಿದೆ. ಆರೋಪಿಗಳೇ ಪರೀಕ್ಷೆಯ ಅರ್ಹತಾ ಪಟ್ಟಿ ಸೋರಿಕೆ ಮಾಡಿರುವುದು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.