ದ್ವಿಚಕ್ರ ವಾಹನ ಚಾಲಕರು ಮತ್ತು ಸಹ ಪ್ರಯಾಣಿಕರ ರಕ್ಷಣೆ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ನಿಷೇಧ ಮಾಡಲಾಗುತ್ತಿದ್ದು, ಈ ಕುರಿತು ಶೀಘ್ರದಲ್ಲಿ ಕಾನೂನು ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರು : ದ್ವಿಚಕ್ರ ವಾಹನ ಚಾಲಕರು ಮತ್ತು ಸಹ ಪ್ರಯಾಣಿಕರ ರಕ್ಷಣೆ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ನಿಷೇಧ ಮಾಡಲಾಗುತ್ತಿದ್ದು, ಈ ಕುರಿತು ಶೀಘ್ರದಲ್ಲಿ ಕಾನೂನು ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಪಘಾತದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿದ್ದರೆ, ಅವರ ಪ್ರಾಣಕ್ಕೆ ಅಪಾಯವುಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹಾಫ್ ಹೆಲ್ಮೆಟ್ ನಿಷೇಧಿಸಲು ಹೊಸದಾಗಿ ಕಾನೂನು ರೂಪಿಸಲಾಗುತ್ತಿದೆ. ಅದು ಅಂತಿಮವಾಗಿದ್ದು, ಶೀಘ್ರದಲ್ಲಿ ಪ್ರಕಟಿಸಲಾಗುವುದು. ಹೊಸ ವರ್ಷದ ವೇಳೆಗೆ ನೂತನ ಕಾನೂನು ಜಾರಿಗೊಳಿಸಿ, ಹಾಫ್ ಹೆಲ್ಮೆಟ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗುತ್ತದೆ ಎಂದು ಹೇಳಿದರು.
ವಾಹನ ಸೀಜ್:
ಹಾಗೆಯೇ, ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ದಂಡ ದುಪ್ಪಟ್ಟು ಮಾಡಲಾಗುತ್ತಿದೆ. ಮೊದಲ ಬಾರಿ ಕಾನೂನು ಉಲ್ಲಂಘನೆಗೆ 5 ಸಾವಿರ ರು. ಮತ್ತು ಎರಡನೇ ಬಾರಿಗೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘಿಸಿದರೆ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಸಂಬಂಧ ಕಾನೂನು ರೂಪಿಸಲಾಗುತ್ತಿದ್ದು, ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಲಾಗುತ್ತದೆ ಎಂದರು.
ಹೊಸ ನಿಯಮ ಏಕೆ?
ಅಪಘಾತದ ವೇಳೆ ಹಾಫ್ ಹೆಲ್ಮೆಟ್ ಧರಿಸಿದವರಿಗೆ ಪ್ರಾಣಾಪಾಯ ಹೆಚ್ಚು
ಹೀಗಾಗಿ ರಾಜ್ಯಾದ್ಯಂತ ಜ.1ರಿಂದ ಹಾಫ್ ಹೆಲ್ಮೆಟ್ ಧರಿಸುವುದು ನಿಷೇಧ
ಇದಕ್ಕಾಗಿ ಶೀಘ್ರವೇ ಹೊಸ ಕಾನೂನು ಸಿದ್ಧಪಡಿಸಲು ಸರ್ಕಾರ ನಿರ್ಧಾರ
ಫುಟ್ಪಾತ್ ಮೇಲೆ ವಾಹನ ಸಂಚಾರ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆ
ಇಂಥ ನಿಯಮ ಉಲ್ಲಂಘನೆಗೆ ಇರುವ ದಂಡದ ಪ್ರಮಾಣ ಹೆಚ್ಚಳ ನಿರ್ಧಾರ
ಮೊದಲ ಸಲ ₹5000, 2ನೇ ಸಲ ₹10000 ದಂಡ, 3ನೇ ಸಾಲ ವಾಹನ ಜಪ್ತಿ
