ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹ ಹೊರತೆಗೆಯಲು ನದಿಗಿಳಿದ ಮತ್ತೊಬ್ಬ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಆನೇಕಲ್ ತಾಲೂಕಿನ ದಕ್ಷಿಣ ಪಿನಾಕಿನಿ ನದಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ದೊಮ್ಮಸಂದ್ರ

ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹ ಹೊರತೆಗೆಯಲು ನದಿಗಿಳಿದ ಮತ್ತೊಬ್ಬ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಆನೇಕಲ್ ತಾಲೂಕಿನ ದಕ್ಷಿಣ ಪಿನಾಕಿನಿ ನದಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕವಿತಾ (35) ಎಂದು ಗುರುತಿಸಲಾಗಿದೆ. ಇವರು ಕಲ್ಕುಂಟೆ ಅಗ್ರಹಾರದ ನಿವಾಸಿಯಾಗಿದ್ದು, ಸುಮಾರು 15 ವರ್ಷಗಳ ಹಿಂದೆ ಶ್ರೀನಿವಾಸ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಗಾಗ ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರವೂ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಇದರಿಂದ ಮನನೊಂದ ಕವಿತಾ ಮಗುವನ್ನು ಕರೆದುಕೊಂಡು ನದಿಗೆ ಹಾರಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಮಗುವನ್ನು ರಕ್ಷಿಸಿದ್ದಾರೆ. ಆದರೆ ಕವಿತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕವಿತಾ ಸಾವಿಗೆ ಪತಿ ಶ್ರೀನಿವಾಸ್ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆಯಾದ ದಿನದಿಂದಲೂ ಕವಿತಾಗೆ ಕಿರುಕುಳ ನೀಡಲಾಗುತ್ತಿತ್ತು. ಭಾನುವಾರವೂ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಇದರಿಂದಲೇ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರಿ ಮುನಿರತ್ನ ಆರೋಪಿಸಿದ್ದಾರೆ. ಇನ್ನು ಕವಿತಾಳ ಮೃತದೇಹವನ್ನು ನದಿಯಿಂದ ಹೊರತೆಗೆಯಲು ಸರ್ಜಾಪುರ ಪೊಲೀಸರು ಮಾಲೂರಿನ ಮಂಜುನಾಥ್ ಎಂಬುವರನ್ನು ಕರೆಸಿದ್ದರು. ಆದರೆ ಮೃತದೇಹ ಹೊರತೆಗೆಯಲು ನದಿಗಿಳಿದ ಮಂಜುನಾಥ್ ಅವರೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಯಾವುದೇ ಸೂಕ್ತ ಸುರಕ್ಷತಾ ಪರಿಕರಗಳಿಲ್ಲದೆ ಮಂಜುನಾಥ್ ಅವರನ್ನು ನೀರಿಗೆ ಇಳಿಸಲಾಗಿದ್ದು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಮಂಜುನಾಥ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.