ಧಾರವಾಡ: ಕೆಪಿಎಸ್ಸಿಯಲ್ಲಿ ಸಾಲು ಸಾಲು ಅಕ್ರಮ ಹಾಗೂ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರವನ್ನು ಖಂಡಿಸಿ ಹಾಗೂ ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ ಸಿಜೆಪಿ ನೇತೃತ್ವದಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಯುವಕರು, ವಿದ್ಯಾರ್ಥಿಗಳು ನಡೆಸಿದ ಹೋರಾಟ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದೇ ತಟಸ್ಥ ನಿಲುವು ತಳೆದಿದ್ದ ಎಪಿವಿಪಿ ಇಂದು ದಿಡೀರನೇ ಕೆಪಿಎಸ್ಸಿ ಹಗರಣ ಮುಂದಿಟ್ಟು ಬೀದಿಗೆ ಇಳಿದಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಹಲವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ ಜನರ ಸೇವೆ ಮಾಡುವುದು ಪ್ರತಿಯೊಬ್ಬ ವಿದ್ಯಾವಂತ ಯುವಕ-ಯುವತಿಯರ ಕನಸಾಗಿದೆ. ಆದರೆ, ರಾಜ್ಯದ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಣಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆಯುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ.

ಇತ್ತೀಚೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ. ಒಂದು ಹುದ್ದೆಗೆ ಬರೋಬ್ಬರಿ ₹80ಲಕ್ಷ ಬೆಲೆ ಕಟ್ಟಲಾಗಿದೆ ಎಂಬ ಆರೋಪವಿದೆ. ಅಭ್ಯರ್ಥಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಹಾಗೂ ಒಎಂಆರ್‌ ಶೀಟ್ ಟ್ಯಾಂಪರಿಂಗ್‌ನಂತಹ ಆರೋಪಗಳು ಕೇಳಿಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಅತ್ಯಂತ ಜವಾಬ್ದಾರಿಯುತ ಹಾಗೂ ಸಾಂವಿಧಾನಿಕ ಉನ್ನತ ಸ್ಥಾನದಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ಸುಳ್ಳು ದಾಖಲೆ ಹಾಗೂ ತಮ್ಮ ಪ್ರಭಾವವನ್ನು ಬಳಸಿ ತಮ್ಮ ಮಕ್ಕಳಿಗೆ ಸರ್ಕಾರಿ ಹುದ್ದೆ ದೊರೆಯುವಂತೆ ಮಾಡಿರುವುದು ಅವರ ಹುದ್ದೆಗೆ ಅವರು ಮಾಡಿದ ಒಂದು ಕಳಂಕ. ರಾಜ್ಯ ಸರ್ಕಾರದ ಕಣ್ಣಮುಂದೆಯೇ ನಡೆಯುತ್ತಿರುವ ಇಂತಹ ಅಕ್ರಮಗಳನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ. ಯುವಕರ ಭವಿಷ್ಯದ ಜೊತೆ ಆಟವಾಡುತ್ತಿರುವ ಮತ್ತು ಅವರ ನಂಬಿಕೆಯನ್ನು ಹುಸಿಗೊಳಿಸುತ್ತಿರುವ ಈ ಭ್ರಷ್ಟ ವ್ಯವಸ್ಥೆ ಕಿತ್ತು ಹಾಕಬೇಕೆಂದು ಆಗ್ರಹಿಸಲಾಯಿತು.


ಪ್ರತಿಭಟನೆಯ ನೇತೃತ್ವವನ್ನು ನಗರ ಕಾರ್ಯದರ್ಶಿ ಸಚಿನ್ ಕೋಟ್ಯಾಳ್ ವಹಿಸಿದ್ದರು. ಸಂಚಾಲಕರಾದ ಅಭಿಷೇಕ್ ದೊಡ್ಡಮನಿ, ನಾಗದತ್ತ ಒಡೆಯರ್, ಸೋಹನ್ ಮಲ್ಲಾಡದ, ಮೌಳಿತೇಜ ದ್ಯಾಮನಗೌಡ, ಲಕ್ಷ್ಮೀನಾರಾಯಣ, ಸುಮಿತ್ ಗೋರ್ಪಡೆ, ಪ್ರಸನ್ನ ಹಾಗೂ ವಿದ್ಯಾರ್ಥಿಗಳಿದ್ದರು.