ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಪಿಎಸ್‌ಸಿ ನಡೆಸಿರುವ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಬಾಲಕೃಷ್ಣ, ಸರ್ಕಾರದ ನೇಮಕಾತಿಗಳಲ್ಲಿ ಸಂಪೂರ್ಣ ಪಾರದರ್ಶಕತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ, ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗ ಲಭಿಸುವಂತಾಗಲು ಕೆಪಿಎಸ್‌ಸಿಯಲ್ಲಿ ಸಮಗ್ರ ಸುಧಾರಣಾ ಕ್ರಮಗಳಿಗೆ ಆಗ್ರಹಿಸಿ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ರಾಜ್ಯದ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ವ್ಯವಸ್ಥಿತ ಅಕ್ರಮಗಳಿಂದ ಸರ್ಕಾರಿ ನೌಕರಿ ಕನಸು ಕಾಣುವ ರಾಜ್ಯದ ಲಕ್ಷಾಂತರ ಯುವಜನತೆಯ ಕನಸು ಹಾಗೂ ಶ್ರಮ ವ್ಯರ್ಥವಾಗಲು ಅವಕಾಶ ನೀಡುವುದಿಲ್ಲ ಎಂದರು.ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ ರಾಜ್ಯದಲ್ಲಿ 4.80 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರದಲ್ಲಿ ನೇಮಕಾತಿ ಆಗುತ್ತಿಲ್ಲ. ಆಗುತ್ತಿರುವ ನೇಮಕಾತಿಗಳಲ್ಲೂ ಅಕ್ರಮ ನಡೆಯುತ್ತಿದೆ. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಕೆಪಿಎಸ್‌ಸಿ ಹಗರಣಗಳ ಬಗ್ಗೆ ಸಮಗ್ರ ತನಿಖೆ ಮಾಡಲು ಸಿಬಿಐ ತನಿಖೆ ಆಗಬೇಕು. ಈ ಸಂಬಂಧ ತನಿಖೆಗೆ ನಿರ್ದೇಶನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದೇನೆ ಎಂದರು.
ಕೆಪಿಎಸ್‌ಸಿ ಹಗರಣದ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ. ಅರ್ಹರಿಗೆ ನ್ಯಾಯ ಒದಗಿಸಲು ಸದನದಲ್ಲಿ ಹೋರಾಟ ನಡೆಯಲಿದೆ. ನ್ಯಾಯ ಕೇಳಿದ್ದಕ್ಕೆ ಲಾಠಿ ಚಾರ್ಜ್ ಮಾಡಿಸುತ್ತೇನೆ ಎನ್ನುವ ಉದ್ಧಟತನದ ಮಾತುಗಳು ಆಡುವುದನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಡಬೇಕು ಎಂದು ಯತ್ನಾಳ್ ಸಲಹೆ ನೀಡಿದರು.
ಪ್ರತಿಭಟನಾಕಾರರ ಬಂಧನ:
ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ನೂರಾರು ಪ್ರತಿಭಟನಾಕಾರರು ಮುಖ್ಯಮಂತ್ರಿಯವರ ನಿವಾಸಕ್ಕೆ ಮುತ್ತಿಗೆ ಹಾಕಲು ಸ್ವಾತಂತ್ರ್ಯ ಉದ್ಯಾನದಿಂದ ಹೊರಟಾಗ ಪೊಲೀಸರು ತಡೆದಾಗ ಕೆಲ ಕಾಲ ಗದ್ದಲ ಉಂಟಾಯಿತು. ನೂರಾರು ಪ್ರತಿಭಟನಾಕಾರರು ಕಬ್ಬಿಣದ ತಡೆಗೋಡೆಯನ್ನು ದಾಟಿ ರಸ್ತೆಗೆ ನುಗ್ಗಲು ಯತ್ನಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬೇರೆಡೆ ಕರೆದೊಯ್ದರು.