ಸಂಪುಟದಿಂದ ಒಬ್ಬರನ್ನು ತೆಗೆದು ಮತ್ತೊಬ್ಬರಿಗೆ ಅವಕಾಶ ಕೊಡಲು ಬರುವುದಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣವೂ ಆಗಿಲ್ಲ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ಅಸಮಾಧಾನಿತ ಎಂ.ಕೃಷ್ಣಪ್ಪ ಅವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಒಕ್ಕಲಿಗ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಚರ್ಚೆ

 ಬೆಂಗಳೂರು : ಸಂಪುಟದಿಂದ ಒಬ್ಬರನ್ನು ತೆಗೆದು ಮತ್ತೊಬ್ಬರಿಗೆ ಅವಕಾಶ ಕೊಡಲು ಬರುವುದಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣವೂ ಆಗಿಲ್ಲ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ಅಸಮಾಧಾನಿತ ಎಂ.ಕೃಷ್ಣಪ್ಪ ಅವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಮತ್ತೊಬ್ಬ ಒಕ್ಕಲಿಗ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ನಡುವೆ ಶನಿವಾರ ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಬಳಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಸಚಿವ ಎಚ್.ಸಿ.ಬಾಲಕೃಷ್ಣ ಅವರೊಂದಿಗೆ ಚಲುವರಾಯಸ್ವಾಮಿ ತೆರಳಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ‘ಶಾಸಕ ಎಂ.ಕೃಷ್ಣಪ್ಪ ಹಿರಿಯರು ಇದ್ದಾರೆ. ಅವರ ಬೇಡಿಕೆ ಸೂಕ್ತವಾಗಿದೆ. ಆದರೆ, ಎಲ್ಲರ ಬೇಡಿಕೆ ಈಡೇರಿಸಲು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ, ಸುರ್ಜೇವಾಲ ಅವರು ಯಾವುದಾದರೂ ಒಂದು ರೀತಿಯಲ್ಲಿ ಅವರನ್ನು ಸಮಾಧಾನಪಡಿಸುತ್ತಾರೆ’ ಎಂದು ಹೇಳಿದರು.

ರಾಜೀನಾಮೆ ಸ್ಥಿತಿ ನಿರ್ಮಾಣವಾಗಲ್ಲ:

ಮುಖ್ಯಮಂತ್ರಿ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್‌.ಸಿ.ಬಾಲಕೃಷ್ಣ ಹೇಳಿದ್ದಾರೆ ಎಂದಾಗ, ‘ಮುಖ್ಯಮಂತ್ರಿ ಅವರಿಗೆ ಇರುಸು-ಮುರುಸು ಆಗಬಾರದು ಎಂದು ಹಾಗೆ ಹೇಳಿದ್ದಾರಷ್ಟೆ. ಆದರೆ, ಅಂಥ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲ. ಅಷ್ಟಕ್ಕೂ ಹಾಗೆ ಒಬ್ಬರನ್ನು ತೆಗೆದು, ಇನ್ನೊಬ್ಬರಿಗೆ ಕೊಡಲು ಬರುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಹಿತಕ್ಕೆ ತಲೆ ಬಾಗುತ್ತೇವೆ-ಬಾಲಕೃಷ್ಣ:

ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬಾಲಕೃಷ್ಣ, ನಮಗೆಲ್ಲ ಅಧಿಕಾರ ಕೊಟ್ಟವರು ಯಾರು? ಸ್ವತಃ ಮುಖ್ಯಮಂತ್ರಿಗಳು. ವಾಪಸ್ ಪಡೆಯುವುದು ಮುಖ್ಯಮಂತ್ರಿಗಳ ವಿವೇಚನೆ. ಅವರು (ಸಿಎಂ) ಹೇಳಿದಂತೆ ನಾವು ಕೇಳುತ್ತೇವೆ. ಪಕ್ಷದ ಹಿತದೃಷ್ಟಿಯಿಂದ ಅವರು ಯಾವುದೇ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ತಲೆಬಾಗುತ್ತೇವೆ ಎಂದರು.

100ಕ್ಕೂ ಹೆಚ್ಚು ಪ್ರಭಾವಿ ಶಾಸಕರಿದ್ದಾರೆ:

ಸಚಿವ ಸ್ಥಾನಕ್ಕೆ ಎಂ.‌ಕೃಷ್ಣಪ್ಪ ಪಟ್ಟುಹಿಡಿದಿರುವ ವಿಚಾರದ ಬಗ್ಗೆ ಕೇಳಿದಾಗ, ‘ಕೃಷ್ಣಪ್ಪ ಪ್ರಭಾವಿ ಇದ್ದಾರೆ. ಅದೇ ರೀತಿ ನಮ್ಮ ಪಕ್ಷದಲ್ಲಿ ನೂರಕ್ಕೂ ಹೆಚ್ಚು ಪ್ರಭಾವಿ ಶಾಸಕರು ಇದ್ದೇವೆ. ಆದರೆ ಮಂತ್ರಿ ಸ್ಥಾನ ಕೊಡಲು ಸಾಧ್ಯವಾಗುವುದು 33 ಶಾಸಕರಿಗೆ ಮಾತ್ರ. ಹಾಗಾಗಿ, ‘ಅಡ್ಜೆಸ್ಟ್’ ಮಾಡಿಕೊಂಡು ಹೋಗಬೇಕು. ಇವತ್ತು ನಮಗೆ ಏನಾದರೂ ತೊಂದರೆ ಆಗಿದೆ ಎಂದರೆ, ಮುಂದೆ ಏನಾದರೂ ಒಂದು ಒಳ್ಳೆಯದು ಕಾದಿದೆ ಎಂದೇ ಅರ್ಥ ಎಂದು ಎಚ್.ಸಿ.ಬಾಲಕೃಷ್ಣ ಸೂಚ್ಯವಾಗಿ ಹೇಳಿದರು.

ಸಿಎಂ ಬೆನ್ನಿಗೆ ನಿಲ್ಲುವಂತೆ ಸ್ವಾಮೀಜಿ ಕಿವಿಮಾತು

ಸಮುದಾಯದ ತಾವೆಲ್ಲರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೆನ್ನಿಗೆ ನಿಂತು ಕೆಲಸ ಮಾಡಬೇಕು ಎಂದು ನೂತನ ಸಚಿವರಾದ ಎನ್‌.ಚಲುವರಾಯಸ್ವಾಮಿ ಮತ್ತು ಎಚ್‌.ಸಿ.ಬಾಲಕೃಷ್ಣ ಅವರಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದ ಹೊಸಹಳ್ಳಿಯ ಆದಿಚುಂಚನಗಿರಿ ಶಾಖಾಮಠದಲ್ಲಿ ನೂತನ ಸಚಿವರಿಬ್ಬರೂ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಖಾತೆ ಹಂಚಿಕೆ, ಬರಗಾಲ, ಬೆಳೆ ಹಾನಿ ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಆಗ ಸ್ವಾಮೀಜಿ, ‘ಸಿಎಂ ಬೆನ್ನಿಗೆ ನಿಂತು ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಸಿ.ಬಾಲಕೃಷ್ಣ, ಹೊಸದಾಗಿ ಸಚಿವರಾದ ಮೇಲೆ ಸ್ವಾಮೀಜಿಯನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದೆವು. ಈ ವೇಳೆ ಸ್ವಾಮೀಜಿ, ಸಿಎಂ ಅವರ ಬೆನ್ನಿಗೆ ನಿಂತು ಕೆಲಸ ಮಾಡಿ. ರಾಜ್ಯದಲ್ಲಿ ಬರಗಾಲ ಬೇರೆ ಇದೆ, ಇದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ ಎಂದರು.