ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯವನ್ನು ತರುವುದಕ್ಕೆ ನಾನು ಕಣ್ಣೀರಲ್ಲ, ರಕ್ತ ಸುರಿಸಿದ್ದೇನೆ. ೨೦ ವರ್ಷ ಅಧಿಕಾರದಲ್ಲಿದ್ದರೂ ಮಂಡ್ಯಕ್ಕೊಂದು ಕೃಷಿ ವಿವಿ ತರುವುದಕ್ಕೆ ನಿಮ್ಮಿಂದ ಸಾಧ್ಯವಾಗಲಿಲ್ಲ. ಆದರೂ, ಮಂಡ್ಯ ನನ್ನದು ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇರ ವಾಗ್ದಾಳಿ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ನೂತನ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾವು ಇಲ್ಲಿಯವರೆಗೂ ಜಿಲ್ಲೆಯಲ್ಲಿ ೧೦ ಸಾವಿರ ಕೋಟಿ ರು. ಹಣ ತಂದು ಅಭಿವೃದ್ಧಿ ಮಾಡಿದ್ದೇವೆ. ಜೆಡಿಎಸ್‌ನವರು ೮೫೦೦ ಕೋಟಿ ಅಂತ ಪೇಪರ್ ಅಲ್ಲಾಡಿಸೋದಲ್ಲ. ನಾವು ತಂದಿರುವ ೧೦ ಸಾವಿರ ಕೋಟಿ ಹಣಕ್ಕೆ ಲೆಕ್ಕ ಕೊಡಿ ಅಂತ ಪತ್ರ ಬರೆದಿದ್ದಾರೆ. ಇವರಿಗೆ ಏನು ಲೆಕ್ಕ ಕೋಡೋದು?, ಲೆಕ್ಕ ಕೊಡುವುದಕ್ಕೆ ನಾನು ಅವರ ಗುಲಾಮನಲ್ಲ. ನಾನು ಜನರ ಗುಲಾಮ. ಜನರಿಗೆ ನಾನು ಲೆಕ್ಕ ಕೊಡುವುದಕ್ಕೆ ಸಿದ್ಧನಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಅಭಿವೃದ್ಧಿ ವಿಷಯದಲ್ಲಿ ನೇರಾ ನೇರಾ ಚರ್ಚೆಗೆ ಸಿದ್ಧನಿದ್ದೇನೆ. ವಿರೋಧಿ ಸ್ನೇಹಿತರು ಎಲ್ಲಿಗೆ ಬೇಕಾದರೂ ಕರೆಯಲಿ ಬಂದು ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ ಕೂಡಲೇ ಕಾಂಗ್ರೆಸ್ ಕತೆ ಮುಗಿದೇ ಹೋಯಿತು. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಇನ್ನು ಕತೆಯೂ ಮುಗಿಯಿತು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದೂ ಮಾಡಿದ್ದೇನೆ. ನಮ್ಮನ್ನು ಮುಗಿಸುವ ಶಕ್ತಿ ಇರೋದು, ಅಧಿಕಾರಕ್ಕೆ ತಂದು ಕೂರಿಸುವ ಶಕ್ತಿ ಇರುವುದು ಜನರ ಕೈಯ್ಯಲ್ಲಿ ಮಾತ್ರ. ಅರ್ಹತೆ ನೋಡಿ ಮಂತ್ರಿಸ್ಥಾನ ನೀಡುವವರು ನಮ್ಮ ನಾಯಕರು. ಇದರಿಂದ ನೀವೇಕೆ ವಿಚಲಿತರಾಗುತ್ತೀರಿ. ನಿಮಗೂ ಅಧಿಕಾರ ಸಿಕ್ಕಿದೆಯಲ್ಲ, ಅಭಿವೃದ್ಧಿ ಮಾಡಿ ಎಂದು ಕಿಡಿಕಾರಿದರು.


ಮೊದಲ ಬಾರಿಗೆ ಶಾಸಕರಾಗಿರುವ ಉದಯ್ ಮತ್ತು ರವಿ ಅವರ ಕೆಲಸವನ್ನೂ ಸಹಿಸಲಾಗುತ್ತಿಲ್ಲ. ಅವರು ಮಾಡುತ್ತಿರುವ ಕೆಲಸಕ್ಕೆ ನಿಮ್ಮ ಕೊಡುಗೆ ಸಮವಲ್ಲ. ಅವರನ್ನು ಸಹಿಸಿಕೊಳ್ಳಲಾಗದೆ ಹೊಟ್ಟೆಉರಿಪಡೋದು ಏಕೆ. ಅಭಿವೃದ್ಧಿಯನ್ನು ಕಂಡು ಸಂತೋಷ ಪಡಿ. ಅವರ ಬೆನ್ನುತಟ್ಟಿ. ಅಸೂಯೆಪಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದರು.

ಸಿದ್ದರಾಮಯ್ಯ-ಡಿಕೆಶಿ ಮುಂದೆ ನಿಮ್ಮ ವಿರೋಧ ಪಕ್ಷದವರ ಆಟ ನಡೆಯಲ್ಲ. ನಮ್ಮ ಪಕ್ಷದವರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಿಮ್ಮದನ್ನು ನೀವು ಸರಿ ಮಾಡಿಕೊಳ್ಳಿ. ಬಿಜೆಪಿಯವರಿಗೆ ಯತ್ನಾಳ್, ಕುಮಾರ್ ಬಂಗಾರಪ್ಪ ಅವರನ್ನು ಸಮಾಧಾನ ಮಾಡಲು ಆಗುತ್ತಾ, ಜೆಡಿಎಸ್‌ನವರಿಗೆ ಜಿ.ಟಿ.ದೇವೇಗೌಡರನ್ನು ಸಮಾಧಾನಪಡಿಸಲು ಆಗುತ್ತಾ ಎಂದು ಪ್ರಶ್ನಿಸಿದರು.

ನಮ್ಮ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ ಎನ್ನುವ ನಮ್ಮ ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿಲ್ಲವೇಕೆ. ಕನಿಷ್ಠ ಅವರು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಐದು ನಿಮಿಷಕ್ಕೆ ಮೇಕೆದಾಟು ಅಣೆಕಟ್ಟು ಕಟ್ಟುವುದಕ್ಕೆ ಅನುಮತಿ ಕೊಡಿಸುತ್ತೇನೆ ಎಂದವರು ಏಕೆ ಕೊಡಿಸುತ್ತಿಲ್ಲ. ಮೇಕೆದಾಟು ಅಣೆಕಟ್ಟು ಕಟ್ಟಲು ಪಕ್ಕದ ರಾಜ್ಯದ ಅವಶ್ಯಕತೆ ಇಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಅರಣ್ಯ ಇಲಾಖೆಯಿಂದ ಅನುಮತಿ ದೊರಕಿಸಲೂ ಅವರಿಂದ ಸಾಧ್ಯವಾಗುತ್ತಿಲ್ಲವೆಂದು ಬಿಜೆಪಿ ಹಾಗೂ ಎಚ್‌ಡಿಕೆಯನ್ನು ಗುರಿಯಾಗಿಸಿಕೊಂಡು ಟೀಕಿಸಿದರು.ಇಂದು ಕಾರ್ಯಕರ್ತರು ನಮಗೆ ನೀಡಿರುವ ಸ್ವಾಗತ ಅವರ ಪ್ರೀತಿಯ ಸಂಕೇತ. ಮುಂದಿನ ಹೋರಾಟಕ್ಕೆ ನಾಂದಿ. ೨೦೨೮ಕ್ಕೆ ಬರುವ ಚುನಾವಣೆಯ ಕಹಳೆ ಊದುವ ಪ್ರೀತಿ. ಮಂಡ್ಯ ಕಾಂಗ್ರೆಸ್‌ನ ಭದ್ರಕೋಟೆ. ಜಿಲ್ಲೆಯನ್ನು ಕೆಲವು ವರ್ಷ ಜೆಡಿಎಸ್ ಕೂಡ ಅತಿಕ್ರಮಿಸಿಕೊಂಡಿತ್ತು. ಅವರೂ ನಮ್ಮದೇ ಭದ್ರಕೋಟೆ ಎಂದುಕೊಂಡಿದ್ದರು. ನಾವು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಜೆಡಿಎಸ್‌ನವರು ನಮ್ಮನ್ನು ಲಘುವಾಗಿ ಪರಿಗಣಿಸಿದ್ದರೂ ನಾವು ಅವರನ್ನು ಲಘುವಾಗಿ ಪರಿಗಣಿಸಿಲ್ಲ. ೨೦೨೩ರಲ್ಲಿ ೬ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಸೂಕ್ತ ಸಮಯದಲ್ಲಿ ಗಮನಹರಿಸದಿದ್ದ ಕಾರಣ ಕೆ.ಆರ್.ಪೇಟೆಯನ್ನು ಕಳೆದುಕೊಳ್ಳಬೇಕಾಯಿತು ಎಂದರು.

ರಾಜ್ಯದ ಯಾವುದೇ ಜಿಲ್ಲೆಯನ್ನು ಗಂಡುಭೂಮಿ ಎನ್ನದಿದ್ದರೂ ಮಂಡ್ಯವನ್ನು ಗಂಡು ಭೂಮಿ ಅಂತಾರೆ. ಬೇರೆ ಜಿಲ್ಲೆಗಳ ನೆಲದಲ್ಲಿಲ್ಲದ ವೈಶಿಷ್ಟ್ಯತೆ ಈ ಜಿಲ್ಲೆಯಲ್ಲಿದೆ. ರಾಜ್ಯ, ರಾಷ್ಟ್ರಮಟ್ಟದ ನಾಯಕರು ಈ ಜಿಲ್ಲೆಯಿಂದ ಉದಯಿಸಿದ್ದಾರೆ. ಮಂಡ್ಯ ಎಂದರೆ ಇಂಡಿಯಾ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ. ಜಿಲ್ಲೆಯಲ್ಲಿ ಅನೇಕ ಹಿರಿಯ ನಾಯಕರು ಆಡಳಿತ ಮಾಡಿದ್ದಾರೆ. ನಮ್ಮನ್ನೂ ಈ ಸ್ಥಾನಕ್ಕೆ ಕೂರಿಸಿದ್ದೀರಿ ಎಂದರೆ ಅದು ನಿಮ್ಮ ಭಿಕ್ಷೆ. ನೀವು ಕೊಟ್ಟ ಭಿಕ್ಷೆಯಿಂದ ನಮಗೆ ಈ ಅವಕಾಶ ಸಿಕ್ಕಿದೆ. ಮತ್ತೊಮ್ಮೆ ಮಂತ್ರಿ ಆಗೋದು ಅಷ್ಟು ಸುಲಭವಲ್ಲ. ಜನರ ಪ್ರೀತಿ ಪ್ರೀತಿ ಇದ್ದರೆ ಮಾತ್ರ ಅದು ಸಾಧ್ಯ ಎಂದು ಹೇಳಿದರು.