ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಶೋಧನಾ ಸಮಿತಿಯ ಅಧ್ಯಕ್ಷರಾಗಿ ಸಹೋದರ ಕೃಷಿ ವಿಶ್ವವಿದ್ಯಾಲಯವೊಂದರ ಹಾಲಿ ಕುಲಪತಿಯನ್ನು ನೇಮಿಸಿರುವುದು ರಾಜ್ಯದ ಇತಿಹಾದಲ್ಲೇ ಅಪರೂಪದ ಬೆಳವಣಿಗೆ. ಇದರಿಂದ ನಿಪ್ಷಕ್ಷಪಾತ ಆಯ್ಕೆ ಅಸಾಧ್ಯವಾಗಿದ್ದು, ಈ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ನೇಮಕಾತಿಯಿಂದ ಹಿತಾಸಕ್ತಿ ಸಂಘರ್ಷ, ನಿಷ್ಪಕ್ಷಪಾತ ಹಾಗೂ ಆಯ್ಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದರು.

ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಆಯ್ಕೆಗೆ ಸಂಬಂಧಿಸಿದಂತೆ ಸರ್ಕಾರದ ಕೃಷಿ ಇಲಾಖೆಯು ಮೇ 14 ರಂದು ಹೊರಡಿಸಿದ ಅಧಿಸೂಚನೆಯನ್ನು ತಕ್ಷಣ ರದ್ದುಮಾಡಬೇಕು. ಉಪಕುಲಪತಿ ನೇಮಕಾತಿಯಲ್ಲಿ ಪರಮಾಧಿಕಾರ ಹೊಂದಿರುವ ರಾಜ್ಯಪಾಲರು ಈ ಕುರಿತು ಮೌನವಹಿಸಿರುವುದು ಸರ್ಕಾರಕ್ಕೆ ಶರಣಾಗತಿ ಆಗಿದ್ದಾರಾ ಎಂಬ ಅನುಮಾನ ಹುಟ್ಟಿಸಿದೆ ಎಂದರು.

ಇದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಹಾಲಿ ಶೋಧನಾ ಸಮಿತಿಯನ್ನು ಕೂಡಲೇ ರದ್ದುಗೊಳಿಸಿ ಯುಜಿಸಿ ಮತ್ತು ಐಸಿಎಆರ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಆಂತರಿಕ ವ್ಯವಸ್ಥೆಯಿಂದ ಸಂಪೂರ್ಣ ಸ್ವತಂತ್ರವಾಗಿರುವ ರಾಷ್ಟ್ರಮಟ್ಟದ ಶಿಕ್ಷಣ ತಜ್ಞ ಅಥವಾ ವಿಜ್ಞಾನಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು. ಅಲ್ಲದೆ ಅಧ್ಯಕ್ಷರು ಮತ್ತು ಸದಸ್ಯರು ಯಾವುದೇ ಹಿತಾಸಕ್ತಿ, ಸಂಘರ್ಷ ಹೊಂದಿಲ್ಲವೆಂಬ ಕಾನೂನು ಬದ್ಧ ಸಾರ್ವಜನಿಕ ಘೋಷಣೆಯನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು


ಕೃಷಿ ಮತ್ತು ಸಂಬಂಧಿತ ವಿಜ್ಞಾನ ವಿಶ್ವವಿದ್ಯಾಲಯಗಳ ಹಾಲಿ ಹಾಗೂ ಇತ್ತೀಚೆಗೆ ನಿವೃತ್ತರಾದ ಕುಲಪತಿಗಳ ಅವಧಿಯಲ್ಲಿ ನಡೆದ ನೇಮಕಾತಿಗಳು, ಕಾಮಗಾರಿಗಳು, ಖರೀದಿಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ಹಣಕಾಸು ಹಾಗೂ ಆಸ್ತಿ ಪರಿಶೀಲನೆ ಒಳಗೊಂಡ ಸ್ವತಂತ್ರ ಲೋಕಾಯುಕ್ತ ತನಿಖೆ ನಡೆಸಬೇಕು. ಅಕ್ರಮ ಕಂಡುಬಂದಲ್ಲಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳ ಸದಸ್ಯರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಯಲ್ಲಿ ಹಣ, ರಾಜಕೀಯ ಪ್ರಭಾವ ಹಾಗೂ ಇನ್ನಿತರ ಹಸ್ತಕ್ಷೇಪಗಳ ಕುರಿತು ಕೇಳಿಬರುತ್ತಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಬೇಕು. ಇದರ ಜೊತೆಗೆ ಅರ್ಹತೆ, ನೈತಿಕತೆ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಆಧಾರವಾಗಿಟ್ಟ ಪಾರದರ್ಶಕ ಆಯ್ಕೆಯ ವ್ಯವಸ್ಥೆಯನ್ನು ರೂಪಿಸಿ ಶೈಕ್ಷಣಿಕ ಹಾಗೂ ರೈತ ಸಮುದಾಯದ ಪ್ರತಿನಿಧಿಗಳ ಆಯ್ಕೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಈ ವಿಶ್ವವಿದ್ಯಾಲಯಗಳ ಸಂಬಂಧ ಇರುವ ಹಾಲಿ ಕಾಯ್ದೆಯನ್ನು ಸಮಕಾಲೀನ ಸವಾಲುಗಳಿಗೆ ಅನುಗುಣವಾಗಿ ತಿದ್ದುಪಡಿಮಾಡಿ, ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಹಣಕಾಸು ಹಾಗೂ ಆಸ್ತಿ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಕಾನೂನುಬದ್ಧವಾಗಿ ಜಾರಿಗೊಳಿಸಬೇಕು ಎಂದ ಅವರು, ವಿದ್ಯಾರ್ಥಿಗಳ ಭವಿಷ್ಯ ಕೃಷಿ ವಿಶ್ವವಿದ್ಯಾಲಯಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅವುಗಳ ಗುಣಮಟ್ಟ ಉತ್ತರದಾಯಿತ್ವ, ಸುಧಾರಣೆಗಳ ಕುರಿತು ವಿಧಾನ ಮಂಡಲದ ಒಳಗೂ-ಹೊರಗೂ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದರು.

ಸರ್ಕಾರ ಯುವಜನರ ಭವಿಷ್ಯದ ಮೇಲೆ ಚೆಲ್ಲಾಟವಾಡುವುದನ್ನು ಬಿಡಬೇಕು. ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ಉಪಕುಲಪತಿಗಳ ಆಯ್ಕೆಯಾಗಬೇಕು ಎಂದು ಪುನರುಚ್ಛರಿಸಿದರು.

ಜೆ.ಎಲ್.ಜನಾರ್ಧನ, ರೈತಸಂಘದ ಕೆ.ಟಿ.ಗಂಗಾಧರ, ಜಿ.ಎನ್.ನಾಗರಾಜ್, ಪ್ರಗತಿಪರ ಕೃಷಿಕ ಎಚ್.ವಿಶ್ವನಾಥ್, ಮಂಜಪ್ಪ, ಹೋರಾಟಗಾರ ಬಿ.ಆರ್.ಜಯಂತ್, ದೇವಕುಮಾರ್ ಮತ್ತಿತರರು ಇದ್ದರು.