ಹನುಮಸಾಗರ: ರೈತರ ಸಾಧನೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ್ ಹೇಳಿದರು.

ಕೃಷಿ ವಿಜ್ಞಾನಿಗಳ, ವಿಶ್ವವಿದ್ಯಾನಿಲಯ, ಕೃಷಿ‌ ವಿಸ್ತರಣಾ ಕೇಂದ್ರ, ಕೃಷಿ ವಿಜ್ಞಾನ ಶಿಕ್ಷಣ ಕೇಂದ್ರದ ವತಿಯಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಸಿರಾಜುದ್ದೀನ್‌ ಮೂಲಿಮನಿ ಅವರ‌ ತೋಟದಲ್ಲಿ ನಡೆದ ಕಾರ್ಯಾಗಾರ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಹೊಸತನ ಅಳವಡಿಸಿಕೊಂಡು ಯಶಸ್ಸು ಸಾಧಿಸಿರುವ ರೈತರನ್ನು ಗುರುತಿಸಿ ಗೌರವಿಸುವ ಜತೆಗೆ ಅವರ ಅನುಭವಗಳನ್ನು ಇತರ ರೈತರಿಗೆ ತಲುಪಿಸುವ ಉದ್ದೇಶದಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿದೆ ಎಂದು ಹೇಳಿದರು.

ರೈತರ ಸಮಸ್ಯೆಗಳನ್ನು ಕಚೇರಿಯಲ್ಲಿ ಕುಳಿತು ತಿಳಿಯಲು ಸಾಧ್ಯವಿಲ್ಲ. ಅವರ ಹೊಲಗಳಿಗೆ ತೆರಳಿ ನೇರವಾಗಿ ಸಂವಾದ ನಡೆಸಿದಾಗ ಮಾತ್ರ ವಾಸ್ತವ ಸಮಸ್ಯೆಗಳು ತಿಳಿಯುತ್ತವೆ. ವೈಜ್ಞಾನಿಕ ಸಲಹೆ ನೀಡುವ ಮೂಲಕ ತಪ್ಪುಗಳನ್ನು ಸರಿಪಡಿಸಿ ಉತ್ತಮ ಉತ್ಪಾದನೆಗೆ ಸಹಕಾರಿಯಾಗಬಹುದು. ರೈತರ ಮನಸ್ಸು ಗೆಲ್ಲುವುದೇ ವಿಸ್ತರಣಾ ಕಾರ್ಯದ ನಿಜವಾದ ಉದ್ದೇಶವಾಗಿದೆ. ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಚಟುವಟಿಕೆ ಕೇವಲ ವಿಶ್ವವಿದ್ಯಾಲಯದ ಆವರಣಕ್ಕೆ ಸೀಮಿತವಾಗದೆ, ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಅರಿತು ವೈಜ್ಞಾನಿಕ ಪರಿಹಾರ ನೀಡುವುದು, ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆಗಳ ಕುರಿತು ಸಮಗ್ರ ಮಾಹಿತಿ ಒದಗಿಸುವುದು, ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವುದು ಸೇರಿದಂತೆ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.

ನಮ್ಮ ಹೆಮ್ಮೆಯ ರೈತ: ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಉತ್ತಮ ಸಾಧನೆ ಮಾಡಿದ ರೈತರನ್ನು ಗುರುತಿಸುವ ಉದ್ದೇಶದಿಂದ ''ನಮ್ಮ ಹೆಮ್ಮೆಯ ರೈತ'' ಯೋಜನೆ ಜಾರಿಗೊಳಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಯಶಸ್ವಿ ರೈತರ ಸಾಧನೆಯನ್ನು ತಿಳಿದು ಪ್ರೇರಣೆ ಪಡೆಯುವಂತೆ ಪ್ರವೇಶ ದ್ವಾರದಲ್ಲಿಯೇ ಅವರ ಮಾಹಿತಿ ಪ್ರದರ್ಶಿಸಲಾಗುತ್ತದೆ. ಸಾಧಕ ರೈತರನ್ನು ಸಮಾಜದ ಮುಂದೆ ಪರಿಚಯಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯುವ ಪೀಳಿಗೆಯನ್ನು ಮತ್ತೆ ಕೃಷಿಯತ್ತ ಆಕರ್ಷಿಸಲು ''ನಮ್ಮ ಹೆಮ್ಮೆಯ ಯುವ ರೈತ'' ಕಾರ್ಯಕ್ರಮ ರೂಪಿಸಲಾಗಿದೆ. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯುವ ರೈತರನ್ನು ಗುರುತಿಸಿ ವಿಶ್ವವಿದ್ಯಾಲಯಕ್ಕೆ ಕರೆತಂದು ತರಬೇತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿ ವರ್ಷ ಆಯ್ಕೆಯಾದ 12 ರೈತರನ್ನು ರೈತರ ದಿನಾಚರಣೆಯಂದು ಸನ್ಮಾನಿಸಲಾಗುತ್ತದೆ. ಅಲ್ಲದೆ, ಒಟ್ಟು 84 ಸಾಧಕ ರೈತರ ಪರಿಚಯ ಹಾಗೂ ಸಾಧನೆಯನ್ನು ಪ್ರಕಟಿಸುವ ಮೂಲಕ ಇತರರಿಗೆ ಮಾದರಿಯಾಗುವಂತೆ ಮಾಡಲಾಗುತ್ತಿದೆ ಎಂದರು.


ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿ ರೈತರಿಗೆ ನ್ಯಾಯಯುತ ಬೆಲೆ ದೊರೆಯಲಿದೆ ಎಂದರು.

ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ ಮಾತನಾಡಿ, ನ. 22ರಂದು ಅತ್ಯುತ್ತಮ ಸಾಧನೆ ಮಾಡಿದ ರೈತರಿಗೆ ''ಕೃಷಿ ರತ್ನ'' ಪ್ರಶಸ್ತಿ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದರು.

ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ.ಆರ್. ಬದರಿಪ್ರಸಾದ್, ಹಿರಿಯ ತಾಂತ್ರಿಕ ಅಧಿಕಾರಿ ಡಾ. ನರಪ್ಪ, ಕೃಷಿ ಅಧಿಕಾರಿ ಆಕಾಶ ಧಾನಿ, ನಜೀರಸಾಬ ಮೂಲಿಮನಿ ಉಪಸ್ಥಿತರಿದ್ದರು.