ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಂತರ್ ಸಚಿವಾಲಯದ ಅಧಿಕಾರಿಗಳ ತಂಡ ಅಕ್ಟೋಬರ್ ಮೊದಲ ವಾರ ರಾಜ್ಯಕ್ಕೆ ಆಗಮಿಸಲಿದೆ. ಈ ತಂಡ ಅ.3ರಿಂದ 6ರವರೆಗೆ ರಾಜ್ಯದ ವಿವಿಧ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿಯ ಪರಿಶೀಲನೆ ನಡೆಸಲಿದೆ.
ನವದೆಹಲಿ : ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಂತರ್ ಸಚಿವಾಲಯದ ಅಧಿಕಾರಿಗಳ ತಂಡ ಅಕ್ಟೋಬರ್ ಮೊದಲ ವಾರ ರಾಜ್ಯಕ್ಕೆ ಆಗಮಿಸಲಿದೆ. ಈ ತಂಡ ಅ.3ರಿಂದ 6ರವರೆಗೆ ರಾಜ್ಯದ ವಿವಿಧ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿಯ ಪರಿಶೀಲನೆ ನಡೆಸಲಿದೆ.
ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಸಮಿತಿ ಮೂರು ತಂಡಗಳಲ್ಲಿ ರಾಜ್ಯದ ವಿವಿಧೆಡೆ ಬರ ಅಧ್ಯಯನ ನಡೆಸಿ, ನಷ್ಟ ಅಂದಾಜಿಸಲಿದೆ. ಒಟ್ಟು 10 ಸದಸ್ಯರ ಕೇಂದ್ರ ತಂಡದಲ್ಲಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಆಹಾರ ವಿತರಣೆ ಹಾಗೂ ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ.
ಅಧಿಕಾರಿಗಳು ಮೂರು ತಂಡಗಳಲ್ಲಿ ಅಧ್ಯಯನ ನಡೆಸಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ.
ಮೊದಲ ತಂಡ ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಎರಡನೇ ತಂಡವು ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಪರಿಶೀಲಿಸಲಿದೆ. ಮೂರನೇ ತಂಡ ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಲಿದೆ.
ಬರದಿಂದಾಗಿ ರೈತರಿಗೆ ಆಗಿರುವ ನಷ್ಟ ಎಷ್ಟು? ಯಾವ ಭಾಗದಲ್ಲಿ ಬೆಳೆ ಹಾನಿ ಹೆಚ್ಚು? ನೀರಿನ ಪರಿಸ್ಥಿತಿ ಹೇಗಿದೆ? ಸೇರಿದಂತೆ ಹಲವು ಅಂಶಗಳನ್ನು ತಂಡ ಪರಿಶೀಲಿಸಲಿದೆ. ಜಿಲ್ಲೆಗಳಿಗೆ ಭೇಟಿ ನೀಡುವ ವೇಳೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಮಾಹಿತಿ ಪಡೆದುಕೊಳ್ಳಲಿದೆ.
ಜಿಲ್ಲೆಗಳ ಪ್ರವಾಸದ ಬಳಿಕ ಅಥವಾ ಪ್ರವಾಸದ ಭಾಗವಾಗಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆಯೋಜಿಸುವ ಸಭೆಯಲ್ಲೂ ಕೇಂದ್ರ ತಂಡ ಭಾಗಿಯಾಗಲಿದೆ. ಈ ವೇಳೆ, ರಾಜ್ಯದ ಬರ ಪರಿಸ್ಥಿತಿ, ಬೆಳೆ ನಷ್ಟ, ನೀರಿನ ಲಭ್ಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ. ಬಳಿಕ, ಅಧ್ಯಯನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ.
ಯಾವ ಜಿಲ್ಲೆಗೆ ಭೇಟಿ?
ತಂಡ 1: ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ
ತಂಡ 2: ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ
ತಂಡ 3: ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ

