ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರಾಜಕೀಯ ಪ್ರಹಸನ ನಡೆಸುತ್ತಿದೆ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರಾಜಕೀಯ ಪ್ರಹಸನ ನಡೆಸುತ್ತಿದೆ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ನಡೆದ ಚರ್ಚೆ, ಸರ್ಕಾರದ ಧೋರಣೆ ಹಾಗೂ ವಿಜಯಪುರ ಜಿಲ್ಲೆಯ ನೀರಾವರಿ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಧಿವೇಶನದಲ್ಲಿ ರೈತರ ಪರ ಗಾಂಭೀರ್ಯತೆ ಕೊರತೆ:

ರಾಜ್ಯದಲ್ಲಿ 150 ವರ್ಷಗಳ ಇತಿಹಾಸದಲ್ಲೇ ಕಾಣದಂತಹ ಭೀಕರ ಬರಗಾಲ ಎದುರಾಗಿದೆ. ಆದರೆ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದ ವಿಶೇಷ ಅಧಿವೇಶನದಲ್ಲಿ 224 ಶಾಸಕರಲ್ಲಿ ಬಹುತೇಕರು ಗಂಭೀರವಾಗಿ ಭಾಗವಹಿಸಲಿಲ್ಲ. ಅಧಿವೇಶನದಲ್ಲಿ ಶಾಸಕರ ದಿನದ ಊಟ-ತಿಂಡಿಗೆ ತಲಾ ₹10,000 ಖರ್ಚು ಮಾಡಲಾಗಿದೆ, ಆದರೆ ರೈತರ ಸಂಕಷ್ಟಕ್ಕೆ ಸೂಕ್ತ ಪರಿಹಾರ ನೀಡುವ ಇಚ್ಛಾಶಕ್ತಿ ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

₹2,500 ಪರಿಹಾರ ರೈತರಿಗೆ ಮಾಡಿದ ಅವಮಾನ:ಪ್ರತಿ ಎಕರೆಗೆ ₹50,000 ಪರಿಹಾರ ನೀಡಬೇಕೆಂಬ ರೈತ ಸಂಘಟನೆಗಳು ಹಾಗೂ ಬಿಜೆಪಿಯ ಆಗ್ರಹವನ್ನು ಕಡೆಗಣಿಸಿ, ಕೇವಲ ₹2,500 ನೀಡುತ್ತಿರುವುದು ಅನ್ನದಾತನಿಗೆ ಮಾಡಿದ ಅಪಮಾನ. ಈ ಮೊತ್ತ ರೈತರ ಖಾತೆಗೆ ಕಳಿಸಿರುವುದನ್ನು ಖಂಡಿಸಿ, ಮುದ್ದೇಬಿಹಾಳ ಎಪಿಎಂಸಿಯಲ್ಲಿ ರೈತರು ಕೂಲಿ ಮಾಡಿ ಸಂಗ್ರಹಿಸಿದ ಹಣವನ್ನು ಮುಖ್ಯಮಂತ್ರಿಗಳಿಗೆ ಅಂಚೆ ಮೂಲಕ ಕಳುಹಿಸುವ ಹಾಗೂ ಮಂತ್ರಿಗಳಿಗೆ ₹2,500 ನೋಟಿನ ಹಾರ ಹಾಕಿ ಸ್ವಾಭಿಮಾನದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಕಾಲುವೆಗಳ ನೀರು ಮತ್ತು ಮೋಟಾರ್ ಜಫ್ತಿ ವಿವಾದ: ಚಿಮ್ಮಲಗಿ ಮತ್ತು ಎಲ್‌ಬಿಸಿ ಕಾಲುವೆಗಳಿಗೆ ಸಮರ್ಪಕ ನೀರು ಹರಿಸದೆ ರೈತರು ಅನಿವಾರ್ಯವಾಗಿ ಪಂಪ್‌ಸೆಟ್ ಅಳವಡಿಸಿಕೊಂಡರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿರುವುದು ಖಂಡನೀಯ. ರೈತರ ಪಂಪ್‌ಸೆಟ್‌ಗಳಿಗೆ ಕೈಹಾಕಲು ಬಂದರೆ ರೈತರ ಪರವಾಗಿ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಹಾಗೂ ಅಧಿಕಾರಿಗಳು ನಿಯಮಬಾಹಿರವಾಗಿ ರೈತರಿಗೆ ಕಿರುಕುಳ ನೀಡಬಾರದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ಮುನ್ನಾಧಣಿ ನಾಡಗೌಡ, ಕೆಂಚಪ್ಪ ಬಿರಾದಾರ, ಸಿದ್ದರಾಜ ಹೊಳಿ, ಸೋಮನಗೌಡ ಬಿರಾದಾರ, ಮಲ್ಲಣ್ಣ ತಂಗಡಗಿ, ಮಲಕೇಂದ್ರರಾಯಗೌಡ ಬಿರಾದಾರ, ಹರೀಶ ನಟೇಕಾರ ಸೇರಿದಂತೆ ಇತರರಿದ್ದರು.