ಬರದ ಕರಿನೆರಳು ರೈತರನ್ನು ಮಾತ್ರ ತಟ್ಟಿಲ್ಲ. ಕುರಿಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನೂರಾರು ಕುರಿಗಾಹಿಗಳ ಬದುಕಿಗೂ ಬರೆ ಎಳೆದಿದೆ.
ಈರಪ್ಪ ನಾಯ್ಕರ್
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬರದ ಕರಿನೆರಳು ರೈತರನ್ನು ಮಾತ್ರ ತಟ್ಟಿಲ್ಲ. ಕುರಿಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನೂರಾರು ಕುರಿಗಾಹಿಗಳ ಬದುಕಿಗೂ ಬರೆ ಎಳೆದಿದೆ. ಹಸಿರು ಮೇವು, ಕುಡಿಯುವ ನೀರು ಅರಸಿಕೊಂಡು ಕುರಿಹಿಂಡುಗಳೊಂದಿಗೆ ನೂರಾರು ಕಿಲೋ ಮೀಟರ್ ದೂರ ಅಲೆದಾಡುವ ಅನಿವಾರ್ಯತೆ ಎದುರಾಗಿದೆ.
ಕೈಯಲ್ಲೊಂದು ಕೋಲು, ಹೆಗಲ ಮೇಲೊಂದು ಕಂಬಳಿ, ಜತೆಗೊಂದು ಕುರಿಹಿಂಡು, ಮಡದಿ-ಮಕ್ಕಳೊಂದಿಗೆ ಗಂಟು-ಮೂಟೆ ಕಟ್ಟಿಕೊಂಡು ಹೊರಟಿರುವ ಕುರಿಗಾಹಿಗಳ ದಂಡು ಬಯಲುಸೀಮೆಯಿಂದ ಮಲೆನಾಡಿನತ್ತ ಮುಖ ಮಾಡಿದೆ. ಊರು, ಕೇರಿ ಬಿಟ್ಟು ಅಡವಿ-ಹೊಲಗಳ ನಡುವೆ ಅಲೆದಾಡುತ್ತಿರುವ ಇವರ ಬದುಕು ಬರದ ಕರಾಳತೆಯನ್ನು ತೆರೆದಿಡುತ್ತಿದೆ.ಮೇವು-ನೀರಿಗಾಗಿ ವಲಸೆ:
ಕುರುಬ ಸಮುದಾಯದ ಸಾಂಪ್ರದಾಯಿಕ ಬದುಕಿನ ಭಾಗವೇ ವಲಸೆ. ಮಳೆ-ಬೆಳೆ ಉತ್ತಮವಾಗಿದ್ದ ವರ್ಷಗಳಲ್ಲಿ ತಮ್ಮೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಕುರಿ ಹಿಂಡುಗಳೊಂದಿಗೆ ಬೀಡುಬಿಟ್ಟು, ಹಸಿರು ಇರುವ ಕಡೆಗಳಲ್ಲಿ ಕೆಲವು ದಿನ ನೆಲೆಸಿ ಮತ್ತೆ ಮುಂದಿನ ಪ್ರದೇಶಕ್ಕೆ ತೆರಳುವುದು ವಾಡಿಕೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನ. ಮಳೆ ಕೈಕೊಟ್ಟಿರುವುದರಿಂದ ಬಯಲುಸೀಮೆಯಲ್ಲಿ ಹಸಿರು ಮೇವು ಮಾಯವಾಗಿದೆ. ಕೆರೆ-ಕಟ್ಟೆಗಳು ಬತ್ತಿವೆ. ಹೊಲಗಳಲ್ಲಿ ಅಳಿದುಳಿದ ಮೇವನ್ನು ಆಶ್ರಯಿಸಿ ಕುರಿಹಿಂಡುಗಳನ್ನು ಸಾಕುವುದು ಕಷ್ಟವಾಗಿದೆ. ಹೀಗಾಗಿ ನೀರು-ಮೇವು ಅರಸಿಕೊಂಡು ದೂರದ ಪ್ರದೇಶಗಳಿಗೆ ವಲಸೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಮಲೆನಾಡಿನತ್ತ ದಂಡು:
ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ ಕುರಿಹಿಂಡುಗಳು ಈ ಬಾರಿ ಮಲೆನಾಡಿನತ್ತ ಸಾಗುತ್ತಿವೆ. ಆದರೆ, ಅಲ್ಲೂ ಇವರ ಸಂಕಷ್ಟ ಸಂಪೂರ್ಣ ದೂರವಾಗಿಲ್ಲ. ಅರಣ್ಯ ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗುತ್ತಿವೆ.ರೈತ- ಕುರಿಗಾಹಿ ಬಾಂಧವ್ಯಕ್ಕೂ ಬರದ ಬರೆ:
ರೈತರು ಮತ್ತು ಕುರಿಗಾಹಿಗಳ ನಡುವೆ ತಲೆತಲಾಂತರದಿಂದಲೂ ವಿಶೇಷ ಬಾಂಧವ್ಯವಿದೆ. ಹೊಲಗಳಲ್ಲಿ ಕುರಿಗಳನ್ನು ಕೆಲವು ದಿನ ಬೀಡುಬಿಡಿಸಿ ಅವುಗಳ ಹಿಕ್ಕೆಯಿಂದ ಭೂಮಿಗೆ ನೈಸರ್ಗಿಕ ಗೊಬ್ಬರ ಒದಗಿಸುವ ಪದ್ಧತಿ ಇಂದಿಗೂ ಹಲವೆಡೆ ಜೀವಂತವಾಗಿದೆ. ಇದಕ್ಕೆ ಪ್ರತಿಯಾಗಿ ರೈತರು ದವಸ-ಧಾನ್ಯ ಅಥವಾ ಹಣ ನೀಡಿ ಕುರಿಗಾಹಿಗಳನ್ನು ಗೌರವದಿಂದ ಬೀಳ್ಕೊಡುವುದು ವಾಡಿಕೆ. ಆದರೆ, ಬರ ಈ ಬಾಂಧವ್ಯಕ್ಕೂ ಬರೆ ಎಳೆದಿದೆ. ರೈತರ ಹೊಲಗಳಲ್ಲೇ ಮೇವು ಇಲ್ಲದಿರುವುದರಿಂದ ಕುರಿಗಾಹಿಗಳಿಗೆ ಹಿಂದಿನಂತೆ ಆತಿಥ್ಯ ನೀಡುವ ಪರಿಸ್ಥಿತಿಯೂ ಕಡಿಮೆಯಾಗಿದೆ.ಬಾಕ್ಸ್...
2500 ಕುರಿ ಜತೆ ಮಲೆನಾಡಿನತ್ತನಾಲ್ಕು ಕುಟುಂಬದವರು ಬಯಲುಸೀಮೆಯಿಂದ ಮಲೆನಾಡಿನತ್ತ 2500 ಕುರಿಗಳನ್ನು ತೆಗೆದುಕೊಂಡು ಹೊರಟಿದ್ದೇವೆ. ಕುಡಿಯಲು ನೀರು, ತಿನ್ನಲು ಮೇವು ಸಿಕ್ಕರೆ ಕುರಿಗಳು ಬದುಕುತ್ತವೆ. ಇದರೊಂದಿಗೆ ನಾವು ಬದುಕುತ್ತೇವೆ. ಹೀಗೆ ಬರಗಾಲ ಮುಂದುವರಿದರೆ ಎಲ್ಲ ಕುರಿಗಳನ್ನು ಮಾರುವ ಪರಿಸ್ಥಿತಿ ಎದುರಾಗಲಿದೆ ಎಂದು ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಕುರಿಗಾಹಿ ನಾಗಪ್ಪ ದಾವಣಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕೋಟ್...ನಾವು ಎಲ್ಲಿರುತ್ತೇವೆಯೋ ಅದೇ ನಮ್ಮ ಊರು. ನೀರು, ಮೇವು ಇದ್ದರೆ ಕುರಿಗಳು ಸೊಂಪಾಗಿರುತ್ತವೆ. ಈ ಬಾರಿ ಬರಗಾಲ ಇರುವುದರಿಂದ ಕಷ್ಟವಾಗಿದೆ. ರೈತರಿಗೆ ಸಿಗುವ ಪರಿಹಾರಗಳಂತೆಯೇ ಸಂಕಷ್ಟದಲ್ಲಿರುವ ಕುರಿಗಾಹಿಗಳಿಗೂ ಪರಿಹಾರ ದೊರೆಯುವಂತಾಗಬೇಕು.
- ಮಾರುತಿ, ಕುರಿಗಾಹಿ.