ಕನ್ನಡಪ್ರಭ ವಾರ್ತೆ ಮಂಡ್ಯ
ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಕೊಡುವ ಸಂಬಂಧ ಜಲಾಶಯದಲ್ಲಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನವಾರ ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ನಡೆದ ೨೦೨೬-೨೭ನೇ ಸಾಲಿನ ಮುಂಗಾರು ಪರಿಸ್ಥಿತಿ, ಬೆಳೆ ಹಾಗೂ ಕೆರೆಗಳ ಪರಿಸ್ಥಿತಿ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ರೈತರ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಸ್ಪಷ್ಟತೆ ನೀಡುವಂತೆ ಗಮನಸೆಳೆದ ಪ್ರಶ್ನೆಗೆ ಉತ್ತರಿಸಿದರು.
ಹಾಲಿ ಕೆಆರ್‌ಎಸ್‌ನಲ್ಲಿ ೧೦೬ ಅಡಿಯವರೆಗೆ ನೀರು ದಾಖಲಾಗಿದೆ. ಮುಂದಿನ ಎಂಟತ್ತು ದಿನಗಳಲ್ಲಿ ಮಳೆಯ ಪರಿಸ್ಥಿತಿ, ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳಿಗೆ ಕಟ್ಟು ನೀರು ಪದ್ಧತಿಯಡಿ ನೀರು ಕೊಡಲು ಸಾಧ್ಯವೋ, ಹೆಚ್ಚು ನೀರು ಹರಿದುಬಂದರೆ ಬೆಳೆಗಳಿಗೆ ನಿರಂತರವಾಗಿ ಹರಿಸುವ ಕುರಿತಂತೆ ನಿರ್ಧಾರ ಮಾಡಲಾಗುವುದು. ಅಲ್ಲಿಯವರೆಗೆ ಕಾದು ನೋಡಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.ಹೇಮಾವತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ತುರ್ತು ಅವಶ್ಯಕತೆ ಇದೆ. ಹಾಗಾಗಿ ಮಂಗಳವಾರವೇ ಆ ಜಿಲ್ಲೆಯ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ಆ ಭಾಗಕ್ಕೆ ನೀರು ಹರಿಸುವ ಸಂಬಂಧ ತೀರ್ಮಾನ ಮಾಡಲಾಗುವುದು. ಆರ್‌ಡಿಪಿಆರ್, ಜಲಜೀವನ್ ಮಿಷನ್ ಕಾಮಗಾರಿಗಳ ಬಗ್ಗೆಯೂ ಸಚಿವರೊಂದಿಗೆ ಚರ್ಚಿಸಿ ಕಾಮಗಾರಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುವ ಭರವಸೆ ನೀಡಿದರು.
ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಅಧಿಕಾರಿಗಳು ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡುವುದು ಉತ್ತಮ. ಕೆರೆಗಳು ತುಂಬಿದರೆ ನಾವು ಅರ್ಧ ಸೇಫ್ ಆಗುತ್ತೇವೆ. ಈಗಾಗಲೇ ತಮಿಳುನಾಡಿನವರು ನೀರಿಗಾಗಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಈಗೇನೋ ಕಬಿನಿ ಜಲಾಶಯ ಭರ್ತಿಯಾಗಿ ಅಲ್ಲಿಂದ ನೀರು ಹೋಗುತ್ತಿದೆ. ಹಾಗಂತ ನಾವು ಮೈಮರೆಯಬಾರದು ಎಂದರು.
ಮುಂದಿನ ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ಕೃಷಿಗೆ ನೀರು ಕೊಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಅಲ್ಲಿಯವರೆಗೆ ಈಗಿರುವ ನೀರಿನಲ್ಲಿ ಸಾಧ್ಯವಾದಷ್ಟು ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಶಾಸಕರಾದ ಪಿ.ರವಿಕುಮಾರ್, ಕೆ.ಎಂ.ಉದಯ್, ಎಚ್.ಟಿ.ಮಂಜು, ವಿಧಾನಪರಿಷತ್ ಸದಸ್ಯರಾದ ದಡದಪುರ ಶಿವಣ್ಣ, ಮಧು ಜಿ.ಮಾದೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇದ್ದರು.