ಕಾರಟಗಿ:
ಬೆಳಗ್ಗೆ ಪಟ್ಟಣ ವಿವಿಧ ಪ್ರದೇಶಗಳಿಂದ ಈದ್ಗಾ ಮೈದಾನಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಧರ್ಮಗುರುಗಳು ಧರ್ಮಗ್ರಂಥ ಪಠಿಸಿದರು. ಬಳಿಕ ಧರ್ಮ ಸಂದೇಶ ನೀಡಿದ ಅವರು, ಬಕ್ರೀದ್ ಸ್ಮರಣೆಗಾಗಿ ತ್ಯಾಗ, ಧರ್ಮದ ಮನೋಭಾವನೆ ರೂಢಿಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ, ಸೌಹಾರ್ದತೆಯಿಂದ ಸಹಬಾಳ್ವೆ ನಡೆಸಿ ಸಮಾಜದಲ್ಲಿ ಸೌಹಾರ್ದತೆ ವಾತಾವರಣ ನಿರ್ಮಿಸಬೇಕು ಎಂದರು.
ಸಚಿವ ಶಿವರಾಜ ತಂಗಡಗಿ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಬಳಿಕ ಮಾತನಾಡಿದ ಸಚಿವರು, ಹಬ್ಬವು ಮುಸ್ಲಿಂ ಸಮಾಜ ಬಾಂಧವರ ಜೀವನದಲ್ಲಿ ಸುಖ, ಸಮೃದ್ಧಿ, ಸಂತೋಷ ಮತ್ತು ನೆಮ್ಮದಿ ತರಲಿ ಎಂದು ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಬಕ್ರೀದ್ ಹಬ್ಬ ಆಚರಿಸಲಾಯಿತು.
ಶಾದಿ ಮಹಲ್ ನಿರ್ಮಾಣಪಟ್ಟಣದಲ್ಲಿ ₹ 2.5 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲಿಯೇ ಶಾದಿಮಹಲ್ ನಿರ್ಮಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಘೋಷಿಸಿದರು. ಈ ಮುಂಚೆ ₹ ೨೫ ಲಕ್ಷ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಈ ಬಾರಿ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿಯೇ ಸಮಾಜಕ್ಕೆ ನೀಡಿದ ಭರವಸೆ ಈಡೇರಿಸುವೆ. ಮುಸ್ಲಿಂ ಕಾಲನಿಗಳಿಗೆ ₹ ೫ ಕೋಟಿ ಅನುದಾನ ನೀಡಲಾಗಿದೆ ಎಂದರು.