ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯ ಹವಾಮಾನ ಇಲಾಖೆಯ ಮಾಹಿತಿಯನ್ವಯ ಈ ಬಾರಿ ಹೆಚ್ಚು ಮಳೆಯಾಗುವ ಸಂಭವವಿರುವುದರಿಂದ ಮುಂದಾಗಬಹುದಾದ ಸಂಭವನೀಯ ಪ್ರವಾಹ, ಪ್ರಾಣ ಹಾನಿ, ಬೆಳೆ, ಮನೆ ಹಾನಿ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಎಲ್ಲಾ ತಾಲೂಕು ತಹಶೀಲ್ದಾರರು, ಅಗತ್ಯ ಸಿದ್ಧತೆ ಕೈಗೊಂಡು ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನದಿ ಪಾತ್ರದ ಗ್ರಾಮಗಳ ಕಡೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಸಂಭವನೀಯ ನೀರು ಮುಳುಗಡೆಯಾಗುವ ಗ್ರಾಮಗಳನ್ನು ಗುರುತಿಸಬೇಕು. ಕಂಪ್ಲಿ ಮತ್ತು ಸಿರುಗುಪ್ಪ ತಾಲೂಕು ಭಾಗದಲ್ಲಿ ಹೆಚ್ಚು ಜಾಗೃತಿ ನೀಡಬೇಕು. ಕುರುಗೋಡು ಭಾಗದ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಹೆಚ್ಚಾಗಿ ಮಳೆ ಸುರಿದರೆ, ನಡು ಗ್ರಾಮದ ಸೇತುವೆ ಮುಳುಗಡೆಯಾಗಲಿದ್ದು, ಈ ಕುರಿತು ಎಚ್ಚರಿಕೆ ನೀಡಬೇಕು. ಅದೇರೀತಿಯಾಗಿ ಬಳ್ಳಾರಿ ತಾಲೂಕು ಭಾಗದ ಕೆಲ ಗ್ರಾಮಗಳಲ್ಲಿಯೂ ಸಹ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನೆಲೆ ಮಳೆಯಿಂದಾಗುವ ಹಾನಿ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಪಾಯ ತಲೆದೋರಬಹುದಾದ ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕೆ ನೀಡಬೇಕು. ಅಲ್ಲಿನ ಮಕ್ಕಳು, ವಯಸ್ಕರು, ಜಾನುವಾರುಗಳನ್ನು ಆಯಾ ಗ್ರಾಮಾಡಳಿತಾಧಿಕಾರಿಗಳ ಸಹಯೋಗದೊಂದಿಗೆ ಗಣತಿ ಮಾಡಿಕೊಂಡು ಇಟ್ಟುಕೊಂಡಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಳಜಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸುವುದು, ಇತರೆ ಪೂರಕ ದಾಸ್ತಾನು ಸಜ್ಜುಮಾಡಿಕೊಳ್ಳಬೇಕು. ಔಷಧಿ ದಾಸ್ತಾನು ಇಟ್ಟುಕೊಳ್ಳಬೇಕು. ಈ ಕುರಿತು ತಾಲೂಕು ವೈದ್ಯಾಧಿಕಾರಿಗಳ ಜೊತೆ ತಹಶೀಲ್ದಾರರು ಸಂಪರ್ಕದಲ್ಲಿರಬೇಕು. ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ಜನ-ಜಾನುವಾರುಗಳಿಗೆ ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.ಅತಿಹೆಚ್ಚು ಮಳೆಯಿಂದಾಗಿ ರಸ್ತೆಗಳಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಬೀಳುವುದು ಕಳೆದ ತಿಂಗಳಿನಲ್ಲಾದ ಮಳೆಯಿಂದ ಕಂಡುಬಂದಿದ್ದು, ಅಂತಹ ಮಹಾನಗರ ಪಾಲಿಕೆ, ಇತರೆ ತಾಲೂಕುಗಳ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಇರುವ ಮರಗಳ ಕಟಾವಿಗೆ ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದ ಜಿಲ್ಲಾಧಿಕಾರಿ, ದುರಸ್ತಿ ವಿದ್ಯುತ್ ಕಂಬಗಳು ಸಹ ಕಂಡುಬಂದಲ್ಲಿ ಜೆಸ್ಕಾಂ ಇಲಾಖೆಯ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಮಳೆಯಿಂದಾಗುವ ಹಾನಿ, ಲಘು ಪ್ರವಾಹ ಹಾಗೂ ಸಮಸ್ಯೆಗಳಿಗೆ ಸಾರ್ವಜನಿಕರಿಗೆ ಸಂಪರ್ಕಿಸಲು ಆಯಾ ತಾಲೂಕು ತಹಶೀಲ್ದಾರರ ಕಚೇರಿ ಮತ್ತು ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಸಹಾಯವಾಣಿ ಸಂಖ್ಯೆ ಆರಂಭಿಸಬೇಕು. ಇದಕ್ಕೆ ಪೂರಕವಾಗಿ ಅಧಿಕಾರಿಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಮಳೆ-ಸಿಡಿಲು ಕುರಿತು ಜಾಗ್ರತೆ ಮೂಡಿಸಿ:
ಜಿಲ್ಲೆಯಲ್ಲಿ ಕಳೆದ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆ-ಸಿಡಿಲಿನಿಂದ 4 ಸಾವು ಪ್ರಕರಣ ವರದಿಯಾಗಿದ್ದು, ಈ ಕುರಿತು ಗ್ರಾಪಂ ಪಿಡಿಒ ಮತ್ತು ಸ್ಥಳೀಯ ಮುಖಂಡರ ಜೊತೆಗೂಡಿ ಗ್ರಾಮಸಭೆಗಳಲ್ಲಿ ಹೆಚ್ಚಿನ ಅರಿವು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.ಮಳೆಗಾಲದಲ್ಲಿ ಜೆಸ್ಕಾಂ ಸಂಬಂಧಿತ ದೂರುಗಳಿದ್ದಲ್ಲಿ ಸಹಾಯವಾಣಿ 1912 ಕುರಿತು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಗ್ರಾಪಂ ವ್ಯಾಪ್ತಿಗಳಲ್ಲಿ ಕುಡಿಯುವ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ಈ ಕುರಿತು ರಾಜ್ಯ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಅದರಿಂದಾಗುವ ಪ್ರಾಣಹಾನಿಗೆ ನೇರ ಅಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ. ಬೀಜ, ರಸಗೊಬ್ಬರ, ಕೀಟ ನಾಶಕ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಡಿಎಪಿ ಗೊಬ್ಬರದ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಇದರ ಬದಲಾಗಿ ರೈತರಿಗೆ ಸಂಯುಕ್ತ ರಸಗೊಬ್ಬರ ಬಳಸಲು ಅಗತ್ಯ ಸಲಹೆಗಳನ್ನು ನೀಡಬೇಕು. ಈ ಕುರಿತು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.ಎಡಿಸಿ ಮಹಮ್ಮದ್ ಝುಬೇರ್ ಎನ್., ಸಹಾಯಕ ಆಯುಕ್ತ ಪಿ.ಪ್ರಮೋದ್, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಸೇರಿ ನೀರಾವರಿ, ಲೋಕೋಪಯೋಗಿ, ಆರ್‌ಡಿಪಿಆರ್, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕು ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.