ಭಗವದ್ಗೀತೆ ಬೋಧನೆ ಅಳವಡಿಸಿಕೊಳ್ಳಿ: ಪುತ್ತಿಗೆ ಶ್ರೀ

KannadaprabhaNewsNetwork |  
Published : Apr 23, 2026, 02:15 AM IST
ಶ್ರೀಗಳನ್ನು ಗೌರವಿಸಿದರು  | Kannada Prabha

ಸಾರಾಂಶ

ಭಗವದ್ಗೀತೆ ಬೋಧನೆಯು ಧರ್ಮಾತೀತ, ಜಾತ್ಯತೀತ ಮತ್ತು ಕಾಲಾತೀತವಾಗಿದ್ದು, ಶಾಂತಿ ಮತ್ತು ನೆಮ್ಮದಿಯ ಜೀವನಕ್ಕಾಗಿ ಪ್ರತಿಯೊಬ್ಬರೂ ಆ ಬೋಧನೆಯನ್ನು ಅರಿತು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಾರವಾರಭಗವದ್ಗೀತೆ ಬೋಧನೆಯು ಧರ್ಮಾತೀತ, ಜಾತ್ಯತೀತ ಮತ್ತು ಕಾಲಾತೀತವಾಗಿದ್ದು, ಶಾಂತಿ ಮತ್ತು ನೆಮ್ಮದಿಯ ಜೀವನಕ್ಕಾಗಿ ಪ್ರತಿಯೊಬ್ಬರೂ ಆ ಬೋಧನೆಯನ್ನು ಅರಿತು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಕರೆ ನೀಡಿದ್ದಾರೆ.ಅವರ ನಾಲ್ಕನೆಯ ಪರ್ಯಾಯ ಯಶಸ್ವಿಯಾಗಿ ಕೊನೆಗೊಂಡ ನಿಮಿತ್ತ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಅಭಿವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೀತೆಯ ಸಂದೇಶ ಮನೆ ಮನೆಗೂ ತಲುಪಲಿ ಎನ್ನುವುದು ಭಗವತ್ಸಂಕಲ್ಪವಾಗಿದ್ದು, ಆ ಉದ್ದೇಶದಿಂದ, ಕೋಟಿ ಗೀತಾ ಲೇಖನ ಯಜ್ಞವನ್ನು ತಾವು ತಮ್ಮ ನಾಲ್ಕನೆ ಪರ್ಯಾಯದ ಅವಧಿಯಲ್ಲಿ ಪ್ರಾರಂಭಿಸಿರುವುದಾಗಿ ಹೇಳಿದರು.

ಉಡುಪಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನ ಗೀತಾ ಪಠಣವನ್ನು, ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಪುತ್ತಿಗೆ ಮಠವು ನಡೆಸಿದ್ದನ್ನು ನೆನೆಸಿಕೊಂಡ ಅವರು, ಅದನ್ನು ಪ್ರಧಾನಿಗಳು ಶ್ಲಾಘಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಶುಭ ಕೋರಿದ ಶ್ರೀಗಳು, ರೂಪಾಲಿ ನಾಯ್ಕ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜನಪರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿ, ಆಶೀರ್ವದಿಸಿದರು.ರೂಪಾಲಿ ನಾಯ್ಕ ಮಾತನಾಡಿ, ತಾವು ಮತ್ತು ತಮ್ಮ ಕುಟುಂಬ, ಶ್ರೀಕೃಷ್ಣನ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು, ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿಗೆ ಮತ್ತು ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡುವುದಾಗಿ ತಿಳಿಸಿದರಲ್ಲದೇ, ಭಗವಂತನ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಯಿತು ಎಂದು ಸಂತಸ ವ್ಯಕ್ತ ಪಡಿಸಿದರು.ಸುಗುಣೇಂದ್ರ ತೀರ್ಥ ಶ್ರೀಗಳನ್ನು ರಾಘವೇಂದ್ರ ಮಠದಿಂದ ರೂಪಾಲಿ ನಾಯ್ಕ ಮತ್ತು ರಾಘವೇಂದ್ರ ಬೃಂದಾವನ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ ರಾವ್ ಸನ್ಮಾನಿಸಿದರು. ಸಮಿತಿಯ ಕಾರ್ಯದರ್ಶಿ ಆರ್.ಎಸ್. ಹಬ್ಬು ಸ್ವಾಗತಿಸಿದರು. ಸಮಿತಿಯ ಕೋಶಾಧ್ಯಕ್ಷ ರಾಮಾ ನಾಯ್ಕ ಅಭಿವಂದನಾ ಪತ್ರ ವಾಚಿಸಿದರು. ಸೋಮನಾಥ ಪದಕಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಧರ್ಮದ ಅನುಸರಣೆಗೆ ಇರುವ ವಿಘ್ನಗಳು ನಿವಾರಣೆಯಾಗಲಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ ಖಂಡನೀಯ: ಈರಣ್ಣ ನವಲಗುಂದ