ಶ್ರಮಿಕ ವರ್ಗದಿಂದ ಭೂಮಿ ಉಳಿವು ಸಾಧ್ಯ

KannadaprabhaNewsNetwork |  
Published : Apr 23, 2026, 02:15 AM IST
೨೨ಕೆಪಿಎಲ್‌೦೯ ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದ ಕೆರೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಪಂಚಾಯತ ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕ ಪಂಚಾಯತ ಹಾಗೂ ಗಿಣಿಗೇರಿ ಗ್ರಾಮ ಪಂಚಾಯತಿಯಿಂದ ವಿಶ್ವ ಭೂದಿನ ಆಚರಣೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಭೂಮಿ ಮೇಲಿರುವ ಎಲ್ಲರನ್ನು ಪೋಷಣೆ ಮಾಡುವವಳು ಭೂತಾಯಿ. ಅತಿಯಾದ ನಗರೀಕರಣದಿಂದ ಭೂ ರಕ್ಷಣೆ ಕಷ್ಟಸಾಧ್ಯ

ಕೊಪ್ಪಳ: ಶ್ರಮಿಕ ವರ್ಗದಿಂದ ಮಾತ್ರ ಭೂಮಿಯ ಉಳಿವು ಸಾಧ್ಯವೆಂದು ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ದರಗದ ಹೇಳಿದರು.

ತಾಲೂಕಿನ ಗಿಣಿಗೇರಾ ಗ್ರಾಮದ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಪಂ ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಪಂ ಹಾಗೂ ಗಿಣಿಗೇರಿ ಗ್ರಾಪಂದಿಂದ ಆಯೋಜಿಸಿದ್ದ ವಿಶ್ವ ಭೂದಿನ ಆಚರಣೆ ಹಿನ್ನೆಲೆಯಲ್ಲಿ ಹೂವಿನಿಂದ ಅಲಂಕಾರಗೊಂಡಿರುವ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

1970 ರಿಂದ ಏ.22 ವಿಶ್ವ ಭೂ ದಿನ ಆಚರಿಸಲಾಗುತ್ತಿದ್ದು, ಭೂಮಿಯ ಉಳಿವಿನಿಂದ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ಭೂಮಿಯನ್ನು ನಾವು ತಾಯಿಯ ಸ್ವರೂಪದಲ್ಲಿ ಕಾಣುತ್ತಿದ್ದು ಭೂಮಿಯನ್ನು ಕಲುಷಿತವಾಗದಂತೆ ಪ್ರತಿಯೊಬ್ಬರು ಸಂರಕ್ಷಿಸಬೇಕು. ಸಾಲುಮರದ ತಿಮ್ಮಕ್ಕ ಸಸಿ ಬೆಳೆಸುವದರ ಜತೆಗೆ ಅವುಗಳನ್ನು ತನ್ನ ಮಕ್ಕಳೆಂದು ಪೋಷಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಭೂಮಿಯ ರಕ್ಷಣೆ ಇಲ್ಲದಿರುವದರಿಂದ ವಿಶ್ವದಲ್ಲಿ ಅನೇಕ ಏರುಪೇರುಗಳು ಆಗುತ್ತಿವೆ. ಶ್ರಮಿಕ ವರ್ಗವು ಭೂಮಿ ಉಳಿವಿಗೆ ಶ್ರಮಿಸಿದಂತೆ ಉಳಿದವರು ಕೂಡಾ ಶ್ರಮಿಸಬೇಕು ಎಂದು ಕರೆ ನೀಡಿದರು.

ಭೂಮಿ ಮೇಲಿರುವ ಎಲ್ಲರನ್ನು ಪೋಷಣೆ ಮಾಡುವವಳು ಭೂತಾಯಿ. ಅತಿಯಾದ ನಗರೀಕರಣದಿಂದ ಭೂ ರಕ್ಷಣೆ ಕಷ್ಟಸಾಧ್ಯ. ಇದರಲ್ಲಿ ಶ್ರಮಿಕ ವರ್ಗದವರು ಭೂಮಿ ಉಳಿವಿಕೆಗೆ ಪ್ರಮುಖ ಪ್ರಾಧಾನ್ಯತೆ ನೀಡುತ್ತಾರೆ. ಬರುವ ದಿನಮಾನಗಳಲ್ಲಿ ಪ್ರಜ್ಞಾವಂತರಾದ ನಾವುಗಳು ಭೂಮಿ ರಕ್ಷಣೆ, ಪೋಷಣೆ ಮಾಡಲು ಕಾರ್ಯನಿರತರಾಗಬೇಕು. ಹಿಂದಿನಿಂದಲೂ ಗ್ರಾಮೀಣ ಭಾಗದಲ್ಲಿ ಮನೆಯ ಹಿರಿಯರು ಭೂಮಿಗೆ ಅತಿ ಹೆಚ್ಚು ಒತ್ತು ನೀಡಿ, ಭೂಮಿ ಉಳಿಸಿರುವದರಿಂದ ನಾವು ನೀವುಗಳು ಸುಖಕರವಾಗಿ ಬದುಕುತ್ತಿದ್ದೇವೆ ಎಂದರು.

ಜಿಲ್ಲಾ ಎಫ್‌ಇಎಸ್‌ ಸಂಸ್ಥೆಯ ಸಂಯೋಜಕ ವಾಸುದೇವಮೂರ್ತಿ ಮಾತನಾಡಿ, ಮಣ್ಣಿನಿಂದ ನಮಗೆ ಅನೇಕ ಲಾಭ ಇದೆ. ಸಸ್ಯ ಸಂಪತ್ತು, ಜಲಸಂಪತ್ತು ಮಾನವ ಸಂಪತ್ತು ಉಳಿಸಿ, ಬಳಸಿ, ಉಳಿಸಿಕೊಂಡು ಹೋಗುವದು ಪ್ರತಿಯೊಬ್ಬ ನಾಗರೀಕನ ಗುರುತರ ಜವಾಬ್ದಾರಿಯಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಜಾನುವಾರು ಸಾಕುತ್ತಿದ್ದರು. ಇದರಿಂದ ಜಾನುವಾರಗಳ ಸಗಣಿ ಜಮೀನಿನ ಬೆಳೆಗಳಿಗೆ ಬಳಕೆ ಮಾಡುತ್ತಿದ್ದರು. ರಾಸಾಯನಿಕ ಗೊಬ್ಬರ ಬಳಕೆಯ ಮೇಲೆ ಅವಲಂಬನೆ ಕಡಿಮೆ ಇರುತ್ತಿತ್ತು. ಆದರೆ ಜಾನುವಾರಗಳ ಸಂಖ್ಯೆ ಕಡಿಮೆಯಾಗಿರುವದರಿಂದ ನಾವು ರಾಸಾಯನಿಕ ಗೊಬ್ಬರದ ಮೇಲೆ ಅತಿಯಾದ ಅವಲಂಬನೆಯಾಗಿದ್ದೇವೆ. ಪ್ರತಿ ಮನೆ ಮುಂದೆ ಒಂದು ಮರ ನೆಡುವದು, ಜಾನುವಾರು ಸಾಕಾಣಿಕೆ ಬಗ್ಗೆ ಗಮನಹರಿಸಬೇಕು ಎಂದರು.

ಕೆರೆ ಅಭಿವೃದ್ದಿ ಸಮಿತಿ ಸದಸ್ಯ ಅನಿಲ್‌ ಜಾಣಾ ಮಾತನಾಡಿ, ಕೆರೆ ಅಭಿವೃದ್ಧಿಯಿಂದ ಗ್ರಾಮಕ್ಕೆ ಬಹಳಷ್ಟು ಅನುಕೂಲವಾಗಿದೆ. ಕೆರೆಯ ಸುತ್ತಲೂ ಅನೇಕ ವಿವಿಧ ರೀತಿಯ ಸಸಿಗಳನ್ನು ನೆಟ್ಟಿರುವುರಿಂದ ಪ್ರಾಣಿ-ಪಕ್ಷಿಗಳಿಗೆ, ವಾಯುವಿಹಾರಕ್ಕೆ ಉತ್ತಮ ವಾತಾವರಣ ಸೃಷ್ಟಿಸಿದೆ ಎಂದರು.

ತಾಪಂ ಕೆಡಿಪಿ ನಾಮನಿರ್ದೇಶಿತ ಸದಸ್ಯ ನಾಗರಾಜ ಚಲ್ಲೊಳ್ಳಿ ಮಾತನಾಡಿ, ಗ್ರಾಮದಲ್ಲಿರುವ ಕೆರೆಗೆ ಉತ್ತಮ ಕಾಯಕಲ್ಪ ನೀಡಲಾಗಿದ್ದು, ಕೆರೆಯಿಂದ ಜಲಸಂರಕ್ಷಣೆಯಾಗುವದರ ಜತೆಗೆ ಸಸ್ಯಸಂಪತ್ತು, ಭೂ ಸಂಪತ್ತು ರಕ್ಷಣೆಗೆ ಅನುಕೂಲವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ ಮಾತನಾಡಿ, ರೈತರು ಬೆಳಗ್ಗೆ ಎದ್ದಾಗಿನಿಂದ ಹಿಡಿದು ಮಲಗುವವರೆಗೆ ಭೂಮಿಯ ಪ್ರತಿ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಅವರು ಭೂಮಿಗೆ ನೀಡಿರುವ ಪ್ರಾಮುಖ್ಯತೆ ನಾವುಗಳು ಕೂಡಾ ನೀಡಬೇಕೆಂದು ಕರೆ ನೀಡಿದರು.

ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್,ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ.ಕೆ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಹನಮೇಶ ನಾಯಕ, ಗುರಪ್ಪ ಗುಡೇಕಾರ್‌, ಹೊನ್ನೂರಸಾಬ ಹೊಸ್ಮನಿ, ಹಿರಿಯ ಆರೋಗ್ಯ ನಿರೀಕ್ಷಕ ನಾಗರಾಜ, ಗಿಣಿಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಪಂ ಕಾರ್ಯದರ್ಶಿ ಮಂಜುನಾಥ ಹೊಸಕೇರಾ, ಕೂಲಿಕಾರರು, ಗ್ರಾಪಂ ಸಿಬ್ಬಂದಿ ಹಾಜರಿದ್ದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಧರ್ಮದ ಅನುಸರಣೆಗೆ ಇರುವ ವಿಘ್ನಗಳು ನಿವಾರಣೆಯಾಗಲಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ ಖಂಡನೀಯ: ಈರಣ್ಣ ನವಲಗುಂದ