ಕನಕದಾಸರ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Nov 09, 2025, 01:45 AM IST
೮ಕೆಎಂಎನ್‌ಡಿ-೨ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. | Kannada Prabha

ಸಾರಾಂಶ

ಐನೂರು ವರ್ಷ ಕಳೆದರೂ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಜಯಂತಿಗಳು ಆಚರಣೆಗಷ್ಟೇ ಸೀಮಿತವಾಗಿರದೆ ಮಹಾಪುರುಷರ ಜೀವನವನ್ನು ಆದರ್ಶವಾಗಿರಿಸಿಕೊಳ್ಳಬೇಕು. ಕನಕದಾಸರು ತಮ್ಮ ಕೀರ್ತನೆಗಳನ್ನು ಸಾರಿದ ಜಾಗಗಳೆಲ್ಲಾ ಈಗ ಪುಣ್ಯ ಸ್ಥಳಗಳಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನಕದಾಸರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಆಶಯಗಳನ್ನು ಜೀವಂತವಾಗಿಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಐನೂರು ವರ್ಷ ಕಳೆದರೂ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಜಯಂತಿಗಳು ಆಚರಣೆಗಷ್ಟೇ ಸೀಮಿತವಾಗಿರದೆ ಮಹಾಪುರುಷರ ಜೀವನವನ್ನು ಆದರ್ಶವಾಗಿರಿಸಿಕೊಳ್ಳಬೇಕು. ಕನಕದಾಸರು ತಮ್ಮ ಕೀರ್ತನೆಗಳನ್ನು ಸಾರಿದ ಜಾಗಗಳೆಲ್ಲಾ ಈಗ ಪುಣ್ಯ ಸ್ಥಳಗಳಾಗಿವೆ. ವಿಶ್ವಕ್ಕೆ ಏಕತೆ ಸಾರಿದ ಅವರ ಸಂದೇಶಗಳನ್ನು ನಾವು ಮನನ ಮಾಡಿಕೊಳ್ಳಬೇಕು. ಅಂದಿನ ಕಾಲಘಟ್ಟದಲ್ಲೇ ಬಡತನ, ಮೌಢ್ಯತೆ, ಅನಕ್ಷರತೆ ಎಲ್ಲವನ್ನೂ ನೈತಿಕವಾಗಿ ಧಿಕ್ಕರಿಸಿ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಸಮಾಜದಲ್ಲಿನ ಅಸಮಾನತೆ, ತಾರತಮ್ಯವನ್ನು ನಿರ್ಮೂಲನೆ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಅಂದಿನ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕೃತಿಗಳ ರಚನೆಯಲ್ಲಿ ಬಳಸುತ್ತಿದ್ದರು. ಸಂಸ್ಕೃತ ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರ ಅರ್ಥವಾಗುತ್ತಿತ್ತು ಹಾಗೂ ಕಲಿಯುತ್ತಿದ್ದರು. ಆದರೆ ಕನಕದಾಸರು ಜನಸಾಮಾನ್ಯರಿಗೂ ತಮ್ಮ ಕೀರ್ತನೆಗಳು ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ಬರೆಯುತ್ತಿದ್ದರು ಎಂದರು.

ಶಾಸಕ ಪಿ.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದವರು. ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ ದೇವರನ್ನು ಒಲಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು ಕನಕದಾಸರು. ಕನಕದಾಸರ ಭಕ್ತಿಗೆ ಶ್ರೀಕೃಷ್ಣ ಮೆಚ್ಚಿ ದಾಸರಿಗೆ ದರ್ಶನ ಕೊಟ್ಟಿದ್ದನ್ನು ಇಂದಿಗೂ ಸಹ ಉಡುಪಿಯಲ್ಲಿ ನಾವು ಕಾಣಬಹುದು ಎಂದರು.

ಜಿಲ್ಲೆಯಲ್ಲಿ ಕನಕದಾಸರ ತತ್ವಗಳನ್ನು ಜೀವಂತವಾಗಿಡಲು ೧ ಕೋಟಿ ರು. ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿದೆ. ಬಸರಾಳಿನಲ್ಲಿ ಅರ್ಧಕ್ಕೆ ನಿಂತು ಹೋಗಿದ್ದ ಕನಕ ಭವನ ನಿರ್ಮಾಣಕ್ಕೆ ೩೦ ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಉಮ್ಮಡಹಳ್ಳಿ ಬೀರೇಶ್ವರ ಸಮುದಾಯ ಭವನಕ್ಕೆ ೨೦ ಲಕ್ಷ ರು. ಬಿಡುಗಡೆ ಮಾಡಲಾಗಿದೆಎಂದು ಹೇಳಿದರು.

ಸಾಹಿತಿ ಡಿ.ಪಿ.ಚಿಕ್ಕಣ್ಣ ಮಾತನಾಡಿ, ಕನಕದಾಸರು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಷ್ಠ ನಾಯಕರಲ್ಲಿ ಒಬ್ಬರು, ತಮ್ಮ ತತ್ವಗಳನ್ನು ಸಾರುವ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದವರು. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ