ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ನಮ್ಮವರು ಎಂಬ ಸಂಸ್ಥೆ ರೈತರಿಗೆ ರಾಜಧಾನಿಯಲ್ಲಿ ಉತ್ತಮ ಮಾರುಕಟ್ಟೆ ಒದಗಿಸಲು ಮುಂದೆ ಬಂದಿದೆ. ರೈತರು ತಮ್ಮ ಉತ್ಪನ್ನಗಳನ್ನು ಬೆಂಗಳೂರಿಗೆ ತಲುಪಿಸಿದಲ್ಲಿ ಅದನ್ನು ವೈಜ್ಞಾನಿಕ ಬೆಲೆಗೆ ಮಾರಾಟ ಮಾಡಿ ರೈತರಿಗೆ ಒಳ್ಳೆಯ ಹಣವನ್ನು ಕೊಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಉದ್ದೇಶಕ್ಕಾಗಿ ಜಿಲ್ಲೆಯ ಯಾವುದಾದರೊಂದು ಗ್ರಾಮ ಅಥವಾ ಹೋಬಳಿಯನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸಣ್ಣ ವಾಹನಗಳನ್ನು ಸಿದ್ಧಪಡಿಸಿ ರೈತರ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ. ಈ ವ್ಯವಸ್ಥೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಅದನ್ನು ವಿಸ್ತರಿಸಿ ಕೃಷಿ ನಷ್ಟವಲ್ಲ. ಲಾಭದಾಯಕ ಉದ್ಯಮ ಎಂಬುದನ್ನು ತೋರಿಸುವ ಕೆಲಸ ಮಾಡಬೇಕಿದೆ ಎಂದರು.ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಶೇ. 90ರಷ್ಟು ರೈತರಿಗೆ ತಲುಪುತ್ತದೆ. ಇನ್ನು ಶೇ. 10ರಷ್ಟು ಪ್ರಮಾಣದಲ್ಲಿ ತಲುಪುತ್ತಿಲ್ಲ. ಈ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದರು.
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಂತಹ ದೊಡ್ಡ ನಗರಕ್ಕೂ ಇದು ವ್ಯಾಪಿಸುವುದರಲ್ಲಿ ಅಚ್ಚರಿಯಿಲ್ಲ. ಇದನ್ನು ಅರಿತು ಯುವಜನರು ಹಳ್ಳಿಯಲ್ಲೇ ಇದ್ದುಕೊಂಡು ಕೃಷಿಯಲ್ಲಿ ಸಾಧನೆ ಮಾಡಬೇಕು. ಅಗತ್ಯವಾದ ಜ್ಞಾನವನ್ನು ಕೃಷಿ ವಿವಿಗಳಲ್ಲಿ ಪಡೆಯಬಹುದು ಎಂದರು.
ಸರ್ವೆ ಗಿಡಗಳನ್ನು ಬೆಳೆಸುವಂತೆ ಸಲಹೆ ನೀಡಿದ ಅವರು, ಒಂದು ಎಕರೆಯಲ್ಲಿ 5 ವರ್ಷಗಳ ಕಾಲ ಬೆಳೆದ ಸರ್ವೆ ಬೆಳೆಗೆ 10 ರಿಂದ 12 ಲಕ್ಷಕ್ಕೂ ಹೆಚ್ಚಿನ ಆದಾಯ ಮಾಡಿಕೊಳ್ಳಬಹುದು. ಎರಡು ವರ್ಷದ ಅಂತರ ಬೆಳೆಯಾಗಿ ಇತರೆ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಇದರಿಂದಲೂ ಲಾಭ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ನಾವೇ ಮಾರುಕಟ್ಟೆ ಮಾಡಲು ಸಹಾಯ ಮಾಡುತ್ತೇವೆ. ರೈತರು ಅರಣ್ಯ ಕೃಷಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಈ ಬಾರಿಯ ಕೃಷಿ ಮೇಳ ಅತ್ಯಂತ ಯಶಸ್ವಿಯಾಗಿದ್ದು, ಸುಮಾರು 10 ರಿಂದ 12 ಲಕ್ಷ ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 20 ಮಂದಿ ರೈತರು ಬೆಳೆ ಬಗ್ಗೆ ತರಬೇತಿ ಪಡೆಯಲು ಬಂದಲ್ಲಿ ನಾವು ಅವರಿಗೆ ತರಬೇತಿ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.ಕಬ್ಬಿನ ಋತುಮಾನ ಬದಲಾವಣೆಯಿಂದ ಇಳುವರಿ ಸಾಧ್ಯ
ಒಂದು ವೇಳೆ ಋತುಮಾನ ಬದಲಾವಣೆ ಮಾಡಿಕೊಂಡು ಬಿತ್ತನೆ ಕಾರ್ಯ ಮಾಡಿದರೆ ಹೆಚ್ಚಿನ ಇಳುವರಿ ಬರುತ್ತೆ. ಆದರೆ, ಕಬ್ಬಿನ ತೂಕ ಕಡಿಮೆಯಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದರು.