ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹಳ್ಳಿಗಳ ದತ್ತು ಸ್ವೀಕಾರ ಕಾರ್ಯ ಎನ್‌ಎಸ್‌ಎಸ್ ಮೂಲಕ ನಡೆಯಲಿ. ರಾಷ್ಟ್ರಿಯ ಸೇವಾ ಯೋಜನೆಯ ಘಟಕಗಳ ಮೂಲಕ ಹಳ್ಳಿಗಳನ್ನು ದತ್ತು ಸ್ವೀಕರಿಸಿ, ಗ್ರಾಮೀಣ ಭಾಗದ ಜನತೆಗೆ ಆಧುನಿಕ ತಂತ್ರಜ್ಞಾನದ ಅರಿವು ನೀಡುವ ಕೆಲಸವಾಗಬೇಕಿದೆ ಎಂದು ಮಂಗಳೂರು ವಿ.ವಿ.ಯ ರಾಷ್ಟ್ರಿಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಹೇಳಿದ್ದಾರೆ.ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ರಾಷ್ಟ್ರಿಯ ಸೇವಾ ಯೋಜನೆಯ ೨೦೨೫-೨೬ರ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಯುವಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲು ಮಾರ್ಗದರ್ಶನ ನೀಡುವ ಶ್ರೇಷ್ಠ ವೇದಿಕೆ. ಇದು ವಿದ್ಯಾರ್ಥಿಗಳಲ್ಲಿ ಸಾಂಘಿಕ, ಮಾನವೀಯ ಮತ್ತು ರಾಷ್ಟ್ರೀಯ ಬದ್ಧತೆಯನ್ನು ಬೆಳೆಸಲು ಪೂರಕ ವಾತವರಣ ಕಲ್ಪಿಸುತ್ತದೆ. ಗಾಂಧೀಜಿಯ ಜನ್ಮ ಶತಮಾನೋತ್ಸವವನ್ನು ಸ್ಮರಿಸುವ ನೆಲೆಯಲ್ಲಿ ೧೯೬೯ರಲ್ಲಿ ರಾಷ್ಟ್ರಿಯ ಸೇವಾ ಯೋಜನೆ ಪ್ರಾರಂಭವಾಯಿತು. ಇಂದು ಭಾರತದಲ್ಲಿ ೫೦೦೦೦ ಅಧಿಕ ಘಟಕಗಳೊಂದಿಗೆ ೪೦ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಇದರ ಭಾಗವಾಗಿದ್ದಾರೆ ಎಂದರು. ಎನ್‌ಎಸ್‌ಎಸ್‌ನ ಲಾಂಛನ ಹೃದಯ ವೈಶಾಲ್ಯತೆಯನ್ನು ಪ್ರತಿನಿಧಿಸುತ್ತದೆ. ಯಾವುದೇ ಭಾಷೆ, ಜಾತಿ, ಧರ್ಮ, ಅಥವಾ ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಮನಸ್ಸನ್ನು ಬೆಳೆಸಲು ಎನ್‌ಎಸ್‌ಎಸ್ ಪ್ರೋತ್ಸಾಹಿಸುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ಸ್ಪಂದನೆ ಮತ್ತು ಸಹಪಾಠಿಗಳೊಂದಿಗೆ ಒಡನಾಟ ಬೆಳೆಸುವ ಗುಣಗಳನ್ನು ಸಾರುತ್ತದೆ. ಭಾಂಧವ್ಯದ ಮೌಲ್ಯ ತಿಳಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಸ್ವಾಯತ್ತ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಲಿಕೆಗೆ ಸಾಕಷ್ಟು ಅವಕಾಶವಿದೆ. ಜ್ಞಾನರ್ಜನೆಯ ಜೊತೆಯಲ್ಲಿ ಜೀವನಾನುಭವವನ್ನು ವೃದ್ಧಿಸುವಲ್ಲಿ ಇದು ಸಹಕಾ ಎಂದರು.
ಕಾಲೇಜಿನ ನಿಕಟಪೂರ್ವ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಸಂತ ಎ. ಅವರನ್ನು ಸನ್ಮಾನಿಸಲಾಯಿತು. ಕಿರಣ್, ಸಂಜನಾ, ಸುಮಿತ್, ಸಮೀಕ್ಷಾ, ಶಶಾಂಕ್, ಪವನ್, ವರ್ಷಿಣಿ ಹಾಗೂ ಪ್ರಕಾಶ್ ನೂತನ ಪದಾಧಿಕಾರಿಗಳ ತಂಡದ ಸದಸ್ಯರಾಗಿ ವಿವಿಧ ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡರು. ಕಿರಣ್ ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುದೀಪ್ ಸ್ವಾಗತಿಸಿದರು. ಶಶಾಂಕ್ ವಂದಿಸಿದರು. ಯೋಜನಾಧಿಕಾರಿ ಅಕ್ಷತಾ ಪ್ರಭು, ಘಟಕದ ಕರ‍್ಯದರ್ಶಿ ವೈಶಾಖ್, ಜೊತೆ ಕಾರ್ಯದರ್ಶಿ ದ್ವಿತಿ ಇದ್ದರು.