ಲಕ್ಷ್ಮೇಶ್ವರ: ಪ್ರತಿ ನಿತ್ಯ ನಾವು ಸೇವಿಸುವ ಆಹಾರ ಕಲಬೆರಿಕೆಯಾಗಿದ್ದರಿಂದ ಅನೇಕ ಆರೋಗ್ಯದ ಸಮಸ್ಯೆ ನೋಡುತ್ತೇವೆ, ಅಸ್ತಮಾ ರೋಗವು ಆಯುರ್ವೇದ ಔಷಧಿಯಿಂದ ಗುಣಮುಖವಾಗುತ್ತದೆ ಎಂದು ಲಕ್ಷ್ಮೇಶ್ವರದ ಮಂತ್ರಾಲಯ ಪಾದಯಾತ್ರಾ ಸಂಘ ಹಮ್ಮಿಕೊಳ್ಳುತ್ತಿರುವ ಉಚಿತ ಅಸ್ತಮಾ ಔಷಧಿ ವಿತರಣೆಯಿಂದ ತಿಳಿದು ಬರುತ್ತದೆ ಎಂದು ಬೆಳ್ಳಟ್ಟಿಯ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮಿಗಳು ಹೇಳಿದರು.
ಪಟ್ಟಣದ ಅಯುರ್ವೇದ ವೈದ್ಯ ದಿ. ಬಾಬುರಾವ್ ಕುಲಕರ್ಣಿ ಅವರು ಸುಮಾರು 59 ವರ್ಷಗಳ ಹಿಂದೆ ಅಸ್ತಮಾ ರೋಗಿಗಳಿಗೆ ಉಚಿತ ಮಂತ್ರಷೌಧಿ ನೀಡುವ ಮೂಲಕ ಅಸ್ತಮಾ ರೋಗಕ್ಕೆ ಆಯುರ್ವೇದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುತ್ತ ಬಂದಿರುವವುದು ಸ್ವಾಗತಾರ್ಹ ಸಂಗತಿಯಾಗಿದೆ, ಮೃಗಶಿರ ಮಳೆಯ ನಕ್ಷತ್ರ ಪ್ರವೇಶದ ವೇಳೆಯಲ್ಲಿ ಈ ಔಷಧಿ ಸೇವನೆ ಮಾಡುವುದರಿಂದ ಅಸ್ತಮಾ ರೋಗ ಗುಣಪಡಿಸಲು ಸಾಧ್ಯವಿದೆ. ಆದ್ದರಿಂದ ಪ್ರಸ್ತುತ ಡಾ. ಹರೀಶ ಕುಲಕರ್ಣಿ ಅವರು ಕಳೆದ 4 ವರ್ಷಗಳಿಂದ ಉಚಿತ ಅಸ್ತಮಾ ಔಷಧಿ ನೀಡುವ ಮೂಲಕ ರೋಗಿಗಳ ಪಾಲಿಗೆ ದೇವರಾಗಿದ್ದಾರೆ. ಅಸ್ತಮಾ ರೋಗಕ್ಕೆ ಅಲೋಪತಿಯಲ್ಲಿ ಔಷಧಿಗಳು ವಿರಳವಾಗಿದ್ದರಿಂದ ಆಯುರ್ವೇದ ಔಷಧಿಯಿಂದ ಅಸ್ತಮಾ ರೋಗ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ, ಆದ್ದರಿಂದ ರೋಗಿಗಳು ಈ ಉಚಿತ ಔಷಧಿ ಸೇವಿಸುವ ಮೂಲಕ ರೋಗದಿಂದ ಮುಕ್ತರಾಗಬೇಕು ಎಂದು ಹೇಳಿದರು.
ಈ ವೇಳೆ ಡಾ. ಹರೀಶ ಕುಲಕರ್ಣಿ, ವಿ.ಜಿ. ಪಡಗೇರಿ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಕೃಷ್ಣ ಕುಲಕರ್ಣಿ, ವಿ.ಎಲ್. ಪೂಜಾರ, ವೆಂಕಣ್ಣ ಗುಡಿ ಸೇರಿದಂತೆ ಅನೇಕರು ಇದ್ದರು.ಶನಿವಾರ ನಡೆದ ಉಚಿತ ಅಸ್ತಮಾ ಔಷಧಿ ವಿತರಣೆ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ತುಂತುರು ಮಳೆಯಲ್ಲಿ ಸಾವಿರಾರು ರೋಗಿಗಳು ಉಚಿತ ಅಸ್ತಮಾ ಔಷಧಿ ಸೇವಿಸಿದ್ದು ಕಂಡು ಬಂದಿತು.