ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾಲೇಜಿನ ಎನ್ಎಸ್ಎಸ್ ಘಟಕ, ಐಕ್ಯೂಎಸಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ 100ಕ್ಕೂ ಹೆಚ್ಚು ಸಸಿಗಳನ್ನೆಟ್ಟು ಪರಿಸರದ ಜಾಗೃತಿ ಮೂಡಿಸಲಾಯಿತು.
ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಪರಿಸರ ಜಾಗೃತಿ ಹಾಗೂ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಟಾವು ಮಾಡಿ ಅರಣ್ಯವನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಕಾಡು ನಾಶವಾಗಿ ಹಲವು ಪ್ರಾಕೃತಿಕ ವಿಕೋಪಗಳು ಎದುರಾಗುತ್ತಿವೆ. ಹಾಗಾಗಿ ಹೆಚ್ಚು ಹಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅರಣ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಜತೆಗೆ ಬೇರೆಯವರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕು. ತಮ್ಮ ಮನೆ, ಜಮೀನುಗಳು, ಖಾಲಿ ಜಾಗಗಳಲ್ಲಿ ಸಸಿ ನೆಡಬೇಕು. ಹುಟ್ಟುಹಬ್ಬಗಳಿಗೆ ಕೇಕ್ ಕತ್ತರಿಸುವ ಬದಲು ಸಸಿನೆಟ್ಟು ಆಚರಣೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ತಲಾ 20 ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯದಲ್ಲಿ ಮುಂದಾಗಬೇಕು ಎಂದರು.
ಕಣಿವೆಕೊಪ್ಪಲು ಅರಣ್ಯ ವಲಯಕ್ಕೆ ತೆರಳಿ ಆಲ, ತೇಗ, ಸಿಲ್ವರ್, ಹುಣಸೆ, ಹೊಂಗೆ, ನೆರಳೆ ಸೇರಿ ವಿವಿಧ ಜಾತಿಯ ಮರಗಳನ್ನು ನೆಟ್ಟರು. ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಕುಮಾರ್ ಬಿ. ಎಸ್, ಕನ್ನಡ ವಿಭಾಗದ ಮುಖ್ಯಸ್ಥ ವಿ.ಶ್ರೀಧರ, ಸಹಾಯಕ ಪ್ರಾಧ್ಯಾಪಕ ರಘುನಂದನ್ ಡಿ, ಅರಣ್ಯಾಧಿಕಾರಿಗಳಾದ ವಿ.ಆರ್.ಧರ್ಮೆಂದ್ರ, ಯೋಗೇಶ್ ಎಂ.ಸಿ, ಧನಂಜಯ ಜಿ.ಕೆ., ಮಂಜುನಾಥ್, ಅಂಕೇಗೌಡ ಸೇರಿ ಅರಣ್ಯ ರಕ್ಷಕ ಹಾಜರಿದ್ದರು.