ಮಾಗಡಿ: ಪಶು ಆಹಾರ ಪೂರೈಕೆಯಲ್ಲಿ ಕಲ್ಲು - ಮಣ್ಣು ಮಿಶ್ರಣದಿಂದ ಜಾನುವಾರುಗಳ ಆರೋಗ್ಯ ಹದಗೆಡಲಿದೆ ಎಂದು ಹೈನುಗಾರರು ಆತಂದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರುಪಾಯಿ ಸಾಲ-ಸೋಲ ಮಾಡಿ ಹಸುಗಳನ್ನು ಸಾಕಿ ಬದುಕು ಕಟ್ಟಿಕೊಂಡಿರುವ ರೈತರಿಗೆ ಈ ಕಳಪೆ ಆಹಾರ ದೊಡ್ಡ ಪೆಟ್ಟು ನೀಡಿದೆ. ದಿನವೊಂದಕ್ಕೆ ಅರ್ಧ ಕೆಜಿಗೂ ಹೆಚ್ಚು ಕಲ್ಲು ಹಸುವಿನ ಹೊಟ್ಟೆ ಸೇರುತ್ತಿರುವುದರಿಂದ ಜೀರ್ಣಾಂಗವ್ಯೂಹ ಹಾಳಾಗುತ್ತಿದೆ. ಇದರಿಂದ 7-8 ಲೀಟರ್ ಹಾಲು ಕೊಡುತ್ತಿದ್ದ ಹಸುಗಳು ದಿಢೀರನೆ 2-3 ಲೀಟರ್ಗೆ ಇಳಿದಿದ್ದು, ಹಸುಗಳು ಕೃಶವಾಗಿ ಸಾವನ್ನಪ್ಪುವ ಭೀತಿ ಎದುರಾಗಿದೆ.
ಸುಮಾರು 25 ವರ್ಷಗಳಿಂದ ರೈತರ ಅಚಲ ನಂಬಿಕೆಗೆ ಪಾತ್ರವಾಗಿದ್ದ ಬಮುಲ್ ಗುಣಮಟ್ಟದ ಪಶು ಆಹಾರಕ್ಕೆ ಇತ್ತೀಚಿನ ತಿಂಗಳಲ್ಲಿ ಕಳಪೆ ಸರಬರಾಜುದಾರರ ಹಾವಳಿ ತಟ್ಟಿದೆ ಎಂದು ರೈತರು ಆರೋಪಿಸಿ, ಕಲ್ಲು ಹೊಡೆಯುವ ಟೆಂಡರ್ ಪಡೆದವರಂತೆ ವರ್ತಿಸುತ್ತಿರುವ ಗುತ್ತಿಗೆದಾರರು ಹಾಗೂ ಇದಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಗ್ರಾಮಸ್ಥರು ಒಕ್ಕೊರಲ ಆಗ್ರಹ ಮಾಡಿದ್ದಾರೆ.ತಾಲೂಕಿನ ಶಿವನಸಂದ್ರ, ಹುಚ್ಚಹನುಮೇಗೌಡರಪಾಳ್ಯ, ಬ್ಯಾಡರಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿರುವ ಹಾಲಿನ ಡೇರಿಗಳಿಗೆ ಬಮುಲ್ ಪಶು ಆಹಾರ ಪೂರೈಸುತ್ತಿದೆ. ಡೇರಿ ಕಾರ್ಯದರ್ಶಿ ಹಾಗೂ ಶಿಬಿರದ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.
(ಫೋಟೊ ಕ್ಯಾಪ್ಷನ್)