ಮಂಡ್ಯ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು ಸಾಮಾನ್ಯ ವರ್ಗದಿಂದ ಸ್ಪರ್ಧೆಗೆ ಅಡ್ಡಿಯಾಗಿರುವ ಕ್ಷೇತ್ರಗಳಲ್ಲಿ ಮೀಸಲು ಬದಲಾವಣೆಗೆ ಪ್ರಬಲ ಸ್ಪರ್ಧಾಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು ಸಾಮಾನ್ಯ ವರ್ಗದಿಂದ ಸ್ಪರ್ಧೆಗೆ ಅಡ್ಡಿಯಾಗಿರುವ ಕ್ಷೇತ್ರಗಳಲ್ಲಿ ಮೀಸಲು ಬದಲಾವಣೆಗೆ ಪ್ರಬಲ ಸ್ಪರ್ಧಾಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಸಾಮಾನ್ಯ ವರ್ಗದಿಂದ ಸ್ಪರ್ಧಿಸಲು ಬಯಸಿದ್ದ ಕ್ಷೇತ್ರಗಳು ಬೇರೆ ವರ್ಗಗಳಿಗೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ಬದಲಾವಣೆ ಮಾಡುವಂತೆ ರಾಜಕೀಯ ನಾಯಕರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಕೆಲವರು ಎರಡು-ಮೂರು ಅವಧಿಯ ಮೀಸಲು ಪಟ್ಟಿಯನ್ನು ಈಗಿನ ಕರಡು ಮೀಸಲು ಪಟ್ಟಿಯೊಂದಿಗೆ ತಾಳೆ ಹಾಕಿ ನೋಡುತ್ತಾ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಎ ವರ್ಗಕ್ಕಿಂತಲೂ ಸಾಮಾನ್ಯ ವರ್ಗದವರಿಂದ ಮೀಸಲು ಬದಲಾವಣೆಗೆ ಹೆಚ್ಚಿನ ಲಾಭಿ ನಡೆಯುತ್ತಿದೆ. ಕಡಿಮೆ ಆದಾಯ ಹೊಂದಿರುವಂತಹ ಸಾಮಾನ್ಯ ವರ್ಗದವರೂ ಸ್ಪರ್ಧಿಸಲು ಅವಕಾಶವಿರುವ ಹಿಂದುಳಿದ ಬಿ ವರ್ಗಕ್ಕೆ ಮೀಸಲು ಬದಲಾಯಿಸುವಂತೆಯೂ ನಾಯಕರ ಮೇಲೆ ಪ್ರಭಾವ ಬೀರುತ್ತಿರುವುದು ಕಂಡುಬಂದಿದೆ.
ಸಾಮಾನ್ಯ ಕ್ಷೇತ್ರಗಳಿಗೆ ನಿಗದಿಯಾಗಬೇಕಿದ್ದ ಮೀಸಲು ಅನುಸೂಚಿತ ಜಾತಿ, ಪಂಗಡ, ಹಿಂದುಳಿದ ಎ ವರ್ಗ ಅಥವಾ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದ ಪಕ್ಷದಲ್ಲಿ ಹಳೆಯ ಮೀಸಲು ಪಟ್ಟಿಗಳನ್ನಿಡಿದು ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗಿರುವುದನ್ನು ತೋರಿಸುತ್ತಾ ಬದಲಾವಣೆಗೆ ಪಟ್ಟು ಹಿಡಿದಿದ್ದರೆ, ಪ್ರಭಾವಿ ಮುಖಂಡರು-ಬೆಂಬಲಿಗರಿರುವ ಕಡೆ ಹಿಂದೆ ಸಾಮಾನ್ಯ ಕ್ಷೇತ್ರವಾಗಿದ್ದಲ್ಲಿ ಅದೇ ಮೀಸಲನ್ನು ಮುಂದುವರೆಸುವಂತೆ, ಒಮ್ಮೆ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದರೆ ಅದನ್ನು ಸಾಮಾನ್ಯ ಕ್ಷೇತ್ರವಾಗಿ ಬದಲಾಯಿಸುವಂತೆಯೂ ಹಠ ಹಿಡಿದಿದ್ದಾರೆ ಎನ್ನಲಾಗಿದೆ.
ಕೆಲವೊಂದು ಕಡೆಗಳಲ್ಲಿ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದವರ ಕ್ಷೇತ್ರಗಳು ಬೇರೆ ಸಮುದಾಯದವರಿಗೆ ನಿಗದಿಯಾಗಿವೆ. ಆ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಬಯಸಿದ್ದ ಪ್ರಭಾವಿ ಮಹಿಳಾ ಮುಖಂಡರು ಮೀಸಲು ಬದಲಾವಣೆ ಮಾಡಿ ಸ್ಪರ್ಧೆಗೆ ಅವಕಾಶ ಕಲ್ಪಿಸುವಂತೆ ನಾಯಕರ ಬೆನ್ನು ಹತ್ತಿದ್ದಾರೆ. ಹಲವು ಕಡೆ ಹಿಂದಿನಿಂದಲೂ ಹಿಂದುಳಿದ ವರ್ಗ ಎ ಸಮುದಾಯಕ್ಕೆ ಮೀಸಲು ನಿಗದಿಯಾಗಿ ಸಾಮಾನ್ಯರಿಗೆ ಸ್ಪರ್ಧಿಸಲು ಅವಕಾಶವೇ ಸಿಗದಂತಾಗಿದೆ. ಅಂತಹ ಕ್ಷೇತ್ರಗಳನ್ನು ಗುರುತಿಸಿ ನಾಯಕರ ಗಮನಕ್ಕೆ ತಂದು ಬದಲಾವಣೆ ಮಾಡುವ ಪ್ರಯತ್ನದಲ್ಲಿ ಹಲವರು ನಿರತರಾಗಿದ್ದಾರೆ.
ತಾಲೂಕು ಪಂಚಾಯ್ತಿಗಿಂತಲೂ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಮೀಸಲು ಬದಲಾವಣೆಗೆ ಆಕಾಂಕ್ಷಿಗಳಿಂದ ಹೆಚ್ಚಿನ ಒತ್ತಡ ನಾಯಕರ ಮೇಲೆ ಬೀಳುತ್ತಿದೆ. ನಾಯಕರೂ ಕೂಡ ಅಳೆದು ತೂಗಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿರುವುದರಿಂದ ಎಲ್ಲೆಲ್ಲಿ ಒತ್ತಡ ಹೆಚ್ಚಾಗಿದೆಯೋ ಆ ಕ್ಷೇತ್ರಗಳ ಮೀಸಲನ್ನು ಬದಲಾಯಿಸಿಕೊಡುವ ಭರವಸೆಯನ್ನು ನೀಡುತ್ತಿದ್ದಾರೆ. ಸಾಮಾನ್ಯವಾಗಿ ಮೀಸಲು ಬದಲಾವಣೆಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಎ ವರ್ಗದವರಿಂದ ಒತ್ತಡ, ಲಾಭಿ ನಡೆಯುವುದು ಕಡಿಮೆ. ಸಾಮಾನ್ಯ ವರ್ಗದವರಿಂದ ಸ್ಪರ್ಧೆಗೆ ಹೆಚ್ಚಿನ ಒತ್ತಡವಿರುವ ಕಾರಣ ಆ ವರ್ಗದವರ ಒತ್ತಡ ನಾಯಕರ ಮೇಲೆ ಹೆಚ್ಚಾಗಿ ಬೀಳುತ್ತಿದೆ. ಹಾಗಂತ ಎಲ್ಲಾ ಕ್ಷೇತ್ರಗಳನ್ನೂ ಬದಲಾವಣೆ ಮಾಡಿಸಲು ಸಾಧ್ಯವಾಗದೆ ಪ್ರಮುಖವೆನಿಸಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ತಾಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ ಎರಡು ಅಥವಾ ಮೂರು ಕ್ಷೇತ್ರಗಳ ಮೀಸಲನ್ನು ಬದಲಾವಣೆ ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ನಡೆಯುತ್ತಿರುವಷ್ಟು ಮೀಸಲು ಬದಲಾವಣೆಯ ಲಾಭಿ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ನಡೆಯುತ್ತಿಲ್ಲ. ಕಡಿಮೆ ಪ್ರಮಾಣದಲ್ಲಿ ಸ್ಪರ್ಧಾಕಾಂಕ್ಷಿಗಳು ಮೀಸಲು ಬದಲಾವಣೆಗೆ ನಾಯಕರ ಬಳಿ ಪೈಪೋಟಿ ನಡೆಸುತ್ತಿರುವುದು ಕಂಡುಬಂದಿದೆ.
ಜೆಡಿಎಸ್ ಪಕ್ಷದ ಪ್ರಬಲ ಸ್ಪರ್ಧಾಕಾಂಕ್ಷಿಗಳು ಎಲ್ಲೆಲ್ಲಿ ಕಂಡುಬರುತ್ತಿದ್ದಾರೋ ಅಲ್ಲಿ ಸ್ಪರ್ಧೆಗೆ ಅವಕಾಶ ಸಿಗದಂತೆ ಮೀಸಲು ಬದಲಾವಣೆ ಮಾಡುವಂತೆ ರಾಜಕೀಯ ನಾಯಕರ ಮೇಲೆ ಕೈ ಪಕ್ಷದ ಮುಖಂಡರು ಒತ್ತಡ ತರುತ್ತಿದ್ದಾರೆ. ಇದನ್ನು ಗಮನಿಸಿರುವ ಜೆಡಿಎಸ್ನವರು ಹಳೆಯ ಮೀಸಲಾತಿ ಪಟ್ಟಿಗಳನ್ನು ಮುಂದಿಟ್ಟುಕೊಂಡು ಮೀಸಲು ಬದಲಾವಣೆಯಾಗದಂತೆ ತಡೆಯುವ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಮೀಸಲು ಪುನರಾವರ್ತನೆಯಾದಲ್ಲಿ ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಕರಡು ಮೀಸಲು: ರಾಜಕೀಯ ನಾಯಕರ ಮಕ್ಕಳಿಗೆ ನಿರಾಸೆ
ಜಿಲ್ಲೆಯ ಹಲವು ರಾಜಕೀಯ ನಾಯಕರ ಮಕ್ಕಳು ಜಿಲ್ಲಾ ಪಂಚಾಯಿತಿ ಚುನಾವಣೆ ಮೂಲಕ ರಾಜಕೀಯ ಅದೃಷ್ಟ ಪರೀಕ್ಷಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಕರಡು ಮೀಸಲು ಪಟ್ಟಿ ಬಿಡುಗಡೆಯಾಗಿರುವುದರಲ್ಲಿ ರಾಜಕೀಯ ನಾಯಕರ ಮಕ್ಕಳ ಸ್ಪರ್ಧೆಗೆ ಪೂರಕವಾದ ಮೀಸಲು ನಿಗದಿಯಾಗದೆ ನಿರಾಸೆಗೊಳಗಾಗುವಂತಾಗಿದೆ. ವಿಧಾನಪರಿಷತ್ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸೇರಿದಂತೆ ಹಲವರ ಮಕ್ಕಳು ಹಾಗೂ ಪ್ರಭಾವಿ ರಾಜಕಾರಣಿಗಳ ಸಹೋದರರು, ಸಂಬಂಧಿಗಳು ಸ್ಪರ್ಧಿಸುವ ಕ್ಷೇತ್ರಗಳು ಬೇರೆ ಸಮುದಾಯಗಳಿಗೆ ನಿಗದಿಯಾಗಿವೆ. ಇದು ಸ್ಪರ್ಧೆಗೆ ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೆ, ಜೆಡಿಎಸ್ ಪಕ್ಷದ ಪ್ರಬಲರು ಇರುವ ಕ್ಷೇತ್ರಗಳ ಮೀಸಲನ್ನು ಬದಲಾಯಿಸುವ ಪ್ರಯತ್ನಗಳನ್ನೂ ಅಲ್ಲಲ್ಲಿ ನಡೆಸಲಾಗುತ್ತಿದೆ. ಆ ಕ್ಷೇತ್ರಗಳಿಗೆ ಹಲವರು ಕಾಂಗ್ರೆಸ್ ಪಕ್ಷದವರಿಂದ ಹೆಚ್ಚಿನ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ರಾಜಕೀಯ ನಾಯಕರ ಮಕ್ಕಳ ಸ್ಪರ್ಧೆಗೆ ಅನುಕೂಲವಾಗುವಂತೆ ಮೀಸಲನ್ನು ಬದಲಾವಣೆ ಮಾಡುವುದಕ್ಕೂ ಹಲವರು ಮಂತ್ರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ.
ಮಹಿಳೆಯರಿಂದಲೂ ಪ್ರಬಲ ಪೈಪೋಟಿ
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ಹಲವು ಮಹಿಳಾಮಣಿಗಳು ಹಲವೆಡೆ ಸ್ಪರ್ಧೆಯಿಂದ ವಂಚಿತರಾಗಿರುವುದರಿಂದ ನಾಯಕರ ಬಳಿ ಮೀಸಲು ಬದಲಾವಣೆಗೆ ಬಿಗಿಪಟ್ಟು ಹಿಡಿದಿದ್ದಾರೆ.
ಹಲವಾರು ವರ್ಷಗಳಿಂದ ಸಾಮಾನ್ಯ ಮಹಿಳೆ ವರ್ಗಕ್ಕೆ ನಿಗದಿಯಾಗದೆ ಹಿಂದುಳಿದ ವರ್ಗ ಎ, ಅನುಸೂಚಿತ ಜಾತಿ, ಪಂಗಡಗಳಿಗೇ ನಿಗದಿಯಾಗಿರುವುದು ಹಲವರನ್ನು ಕಂಗೆಡಿಸುವಂತೆ ಮಾಡಿದೆ. ಇದೀಗ ಹತ್ತು ವರ್ಷಗಳ ಬಳಿಕ ಹೊರಡಿಸಿರುವ ಕರಡು ಮೀಸಲು ಪಟ್ಟಿಯಲ್ಲೂ ಸಾಮಾನ್ಯ ಮಹಿಳೆ ಅಥವಾ ಸಾಮಾನ್ಯ ವರ್ಗಕ್ಕೂ ಸಿಗದೆ ಮತ್ತೆ ಹಿಂದುಳಿದ ವರ್ಗ ಅಥವಾ ಇತರೆ ಸಮುದಾಯಕ್ಕೆ ಮೀಸಲು ನಿಗದಿಯಾಗಿರುವುದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಆ ಕ್ಷೇತ್ರಗಳ ಮೀಸಲು ಬದಲಾಯಿಸುವಂತೆ ಆಕ್ಷೇಪಣೆಗಳನ್ನು ಸಲ್ಲಿಸುತ್ತಾ ನಾಯಕರ ಬಳಿ ಒತ್ತಡವನ್ನೂ ಹೇರುತ್ತಿದ್ದಾರೆ.ಆಕ್ಷೇಪಣೆಗಳನ್ನು ಸಲ್ಲಿಸಲು ಇಂದು ಕೊನೆಯ ದಿನ
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳ ಕರಡು ಮೀಸಲು ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಸೋಮವಾರ (ಅ.೧೯) ಕೊನೆಯ ದಿನವಾಗಿದೆ. ಅ.೯ರಂದು ಕರಡು ಮೀಸಲು ಪಟ್ಟಿಯನ್ನು ಬಿಡುಗಡೆಗೊಳಿಸಿ ಹತ್ತು ದಿನಗಳ ಕಾಲ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಕ್ಷೇಪಣೆಗಳು ಎಷ್ಟು ಪ್ರಮಾಣದಲ್ಲಿ ಸಲ್ಲಿಕೆಯಾಗಿವೆ, ಯಾವ ಯಾವ ಕ್ಷೇತ್ರಗಳಿಗೆ ಮೀಸಲಿನಲ್ಲಿ ವ್ಯತ್ಯಾಸವಾಗಿದೆ, ಎಲ್ಲೆಲ್ಲಿ ಮೀಸಲು ಪುನರಾವರ್ತನೆಯಾಗಿದೆ, ಎಲ್ಲೆಲ್ಲಿ ಬದಲಾವಣೆ ಮಾಡಬೇಕಿದೆ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಅಂತಿಮ ಮೀಸಲು ಪಟ್ಟಿಯನ್ನು ರಾಜ್ಯಸರ್ಕಾರ ಬಿಡುಗಡೆಗೊಳಿಸಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.