ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಇಂತಹ ಪ್ರಕರಣ ನಡೆಯುತ್ತಿದ್ದಲ್ಲಿ ಈ ಬಗ್ಗೆ ಯಾರನ್ನು ಸಂಪರ್ಕಿಸಿ ದೂರು ನೀಡಬೇಕು.
ಕಾರವಾರ:
ಪೋಷಕರಿಗೆ ನಿರ್ದಿಷ್ಟವಾಗಿ ಇಂತಹುದೇ ಮಗು ಜನಿಸುವಂತೆ ಚಿಕಿತ್ಸೆ ಅಥವಾ ಔಷಧಿ ನೀಡಲಾಗುವುದು ಎಂದು ಜಾಹೀರಾತು ಪ್ರಕಟಿಸುವುದೂ ಕೂಡಾ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅನುಸಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ರೋಡ್ರಿಗಸ್ ತಿಳಿಸಿದರು.ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಶುಕ್ರವಾರ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಗರ್ಭಧಾರಣೆ ಆದಾಗಿನಿಂದ ಮಗು ಜನಿಸುವವರೆಗೂ ಯಾವುದೇ ಹಂತದಲ್ಲೂ ಅದರ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಇಂತಹ ಪ್ರಕರಣ ನಡೆಯುತ್ತಿದ್ದಲ್ಲಿ ಈ ಬಗ್ಗೆ ಯಾರನ್ನು ಸಂಪರ್ಕಿಸಿ ದೂರು ನೀಡಬೇಕು. ಅವರ ದೂರವಾಣಿ ಸಂಖ್ಯೆ, ವಿಳಾಸದ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು. ಕಾಯ್ದೆಯ ತೀವ್ರತೆ ಬಗ್ಗೆ ತಿಳಿಸುವ ಮತ್ತು ತಂತ್ರಜ್ಞಾನದ ದುರುಪಯೋಗ ತಡೆಯುವಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಹೆಚ್ಚಿನ ತಪಾಸಣಾ ಕ್ರಮ ಕೈಗೊಳ್ಳಬೇಕು, ಸ್ಕ್ಯಾನಿಂಗ್ ಸೆಂಟರ್‌ಗಳು ತಮ್ಮ ಕೇಂದ್ರಗಳಲ್ಲಿ ಎಲ್ಲ ಪರೀಕ್ಷಾ ದಾಖಲಾತಿ ನಿಗದಿಪಡಿಸಿದ ಸೂಕ್ತ ರೀತಿಯಲ್ಲಿ ಸಂರಕ್ಷಿಸಿಡಬೇಕು ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಸಮಾಜದಲ್ಲಿ ಲಿಂಗ ತಾರತಮ್ಯ ಸರಿಯಲ್ಲ. ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ದುರ್ಬಳಕೆ ನಡೆಯದಂತೆ ನಿರಂತರವಾಗಿ ತಪಾಸಣೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಪ್ರಕರಣ ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಇರುವ ಲಿಂಗಾನುಪಾತದ ವ್ಯತ್ಯಾಸ ಗಮನಿಸಿದರೆ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನ ಆಗದಿರುವುದು ಕಂಡು ಬರುತ್ತದೆ. ಕಾನೂನು ಪ್ರಕಾರ ಗರ್ಭಧಾರಣೆಯಾದ ಪ್ರತಿ ಮಗುವು ಜೀವಿಸುವ ಹಕ್ಕು ಹೊಂದಿದ್ದು, ಅದನ್ನು ನಾಶಪಡಿಸಲು ಪೋಷಕರಿಗೂ ಹಕ್ಕಿಲ್ಲ. ಕಾನೂನಿನ ಅರಿವಿಗೂ ಬಾರದಂತೆ ವ್ಯವಸ್ಥಿತಿ ರೀತಿಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಡೆಯುತ್ತಿದ್ದು, ಇದನ್ನು ತಡೆಯಲು ಕಾನೂನನ್ನು ಇನಷ್ಟು ಬಲಪಡಿಸುವುದು ಅಗತ್ಯವಿದೆ ಎಂದರು.
ಡಿಎಚ್‌ಒ ಡಾ. ನೀರಜ್ ಬಿ.ವಿ., ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ. ಶಿವಾನಂದ ಕುಡ್ತಳಕರ, ಕೆಪಿಎಂಇ ಮತ್ತು ಪಿಸಿಪಿಎನ್‌ಡಿಟಿ ರಾಜ್ಯ ನೋಡಲ್ ಅಧಿಕಾರಿ ಡಾ. ವಿವೇಕ ದೊರೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಪಿಸಿಪಿಎನ್‌ಡಿಟಿ ಸಲಹಾ ಸಮಿತಿ ಸದಸ್ಯೆ ಪುಷ್ಪಾ ಜಿ. ನಾಯ್ಕ, ನ್ಯಾಯವಾದಿ ಎ.ಆರ್.ಬಿ. ಡಿಸೋಜಾ, ಡಾ. ಅನ್ನಪೂರ್ಣ ವಸ್ತ್ರದ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.