ವೈರಲ್‌ ಫೀವರ್‌ ನಿಯಂತ್ರಣಕ್ಕಾಗಿ ಕುಷ್ಟಗಿಯ ನೆರೆಬೆಂಚಿ ಗ್ರಾಮದಲ್ಲಿ ಫಾಗಿಂಗ್‌ ಕಾರ್ಯಾಚರಣೆ

KannadaprabhaNewsNetwork | Published : Feb 10, 2024 1:46 AM

ಸಾರಾಂಶ

ಳೆದ ಸುಮಾರು ಎರಡು ವಾರಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಹಾಗೂ ಅನೈರ್ಮಲ್ಯ ವಾತಾವರಣದಿಂದ ಗ್ರಾಮದಲ್ಲಿರುವ ಸುಮಾರು 150ಕ್ಕೂ ಅಧಿಕ ಜನರಿಗೆ ವೈರಲ್ ಫೀವರ್ ಹಾಗೂ ಮೈಕೈ ನೋವು ಸೇರಿದಂತೆ ವಿವಿಧ ಲಕ್ಷಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ರಕ್ತ ತಪಾಸಣೆ ಮಾಡಿದಾಗ ಒಬ್ಬರಿಗೆ ಮಾತ್ರ ಚಿಕೂನ್‌ ಗುನ್ಯ ದೃಢಪಟ್ಟಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.

ಕುಷ್ಟಗಿ: ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ಉಲ್ಬಣಗೊಂಡಿರುವ ವೈರಲ್ ಫೀವರ್‌ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಬಿಟ್ಟು ಬಿಡದೇ ಕೆಲಸ ಮಾಡುತ್ತಿದ್ದಾರೆ. ಸದ್ಯ ಜ್ವರವು ನಿಯಂತ್ರಣದಲ್ಲಿದೆ.ಕಳೆದ ಸುಮಾರು ಎರಡು ವಾರಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಹಾಗೂ ಅನೈರ್ಮಲ್ಯ ವಾತಾವರಣದಿಂದ ಗ್ರಾಮದಲ್ಲಿರುವ ಸುಮಾರು 150ಕ್ಕೂ ಅಧಿಕ ಜನರಿಗೆ ವೈರಲ್ ಫೀವರ್ ಹಾಗೂ ಮೈಕೈ ನೋವು ಸೇರಿದಂತೆ ವಿವಿಧ ಲಕ್ಷಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ರಕ್ತ ತಪಾಸಣೆ ಮಾಡಿದಾಗ ಒಬ್ಬರಿಗೆ ಮಾತ್ರ ಚಿಕೂನ್‌ ಗುನ್ಯ ದೃಢಪಟ್ಟಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.ಗುರುವಾರ ಬೆಳಿಗ್ಗೆ ಕುಷ್ಟಗಿ ತಹಸೀಲ್ದಾರ್ ರವಿ ಅಂಗಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಟಿ.ಲಿಂಗರಾಜು. ಟಿಎಚ್ಒ ಡಾ.ಆನಂದ ಗೊಟೂರು, ಪಿಎಸೈ ಮುದ್ದುರಂಗಸ್ವಾಮಿ ಭೇಟಿ ನೀಡಿ ಗ್ರಾಮಸ್ಥರಲ್ಲಿ ಧೈರ್ಯ ತುಂಬಿ ಕೆಲವರನ್ನು ಆಸ್ಪತ್ರೆಗೆ ಸೇರಿಸುವುದರೊಂದಿಗೆ ಗ್ರಾಪಂ ಅಧಿಕಾರಿಗಳಿಗೆ ಹಾಗೂ ಗ್ರಾಪಂ ಸದಸ್ಯರಿಗೆ ಗ್ರಾಮದ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.ಸ್ವಚ್ಛತೆಗೆ ಮುಂದಾದ ಗ್ರಾಪಂ:ಗ್ರಾಪಂ ಅಧಿಕಾರಿಗಳು ಗ್ರಾಮಗಳಲ್ಲಿ ನಿಂತಿರುವ ನೀರು, ತ್ಯಾಜ್ಯವನ್ನು ಜೆಸಿಬಿ ಮೂಲಕ ಸ್ವಚ್ಛತೆಗೊಳಿಸಿದರು. ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಕಾರ್ಯಾಚರಣೆ ನಡೆಸಿದರು. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಇಡುವಂತೆ ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸಲಾಯಿತು.ಲಾರ್ವಾ ಸರ್ವೇ:ಮುಂಜಾಗ್ರತಾ ಕ್ರಮವಾಗಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಅಧಿಕಾರಿಗಳು ಸೇರಿಕೊಂಡು ಮನೆ ಮನೆಗೆ ಭೇಟಿ ನೀಡುವ ಮೂಲಕ ಲಾರ್ವಾ ಸರ್ವೇ ಕೈಗೊಂಡು ಸಾರ್ವಜನಿಕರಿಗೆ ಸ್ವಚ್ಛತೆ ಹಾಗೂ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ಉಂಟಾದ ಜ್ವರದ ತೀವ್ರತೆ ನಿಯಂತ್ರಣಕ್ಕೆ ಬರುತ್ತಿದೆ. ಇಂದು ನಾಲ್ಕು ರೋಗಿಗಳು ಒಪಿಡಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ. ಸದ್ಯ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಕುಷ್ಟಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೊಟೂರು.ಕಂದಕೂರು ಗ್ರಾಪಂ ವ್ಯಾಪ್ತಿಯ ನೆರೆಬೆಂಚಿಯಲ್ಲಿ ಚರಂಡಿ ಸ್ವಚ್ಛತೆ ಹಾಗೂ ಗ್ರಾಮಗಳ ಬೀದಿಗಳ ಸ್ವಚ್ಛತೆ ಮಾಡಿಸಿದ್ದು ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಿಸಲಾಗಿದೆ ಎನ್ನುತ್ತಾರೆ ಕಂದಕೂರು ಪಿಡಿಒ ರಮೇಶ ಬೆಳ್ಳಿಹಾಳ.

Share this article