ಮುಂಡರಗಿ: ತೊಗರಿ ಹಾಗೂ ಕಡಲೆಯಲ್ಲಿ ಕಾಯಿಕೊರಕದ(ಹೆಲಿಕೊವರ್ಪಾ) ಬಾದೆ ಕಂಡು ಬಂದಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದ್ದಾರೆ.
ಕಡಲೆಯಲ್ಲಿ ಕಾಯಿಕೊರಕದ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿನಲ್ಲಿ 2 ಗ್ರಾಂ ಇಮಾಮೆಕ್ಟಿನ್ ಬೆಂಝೋಯೇಟ್ ಬೆರೆಸಿ ಸಿಂಪಡಿಸಬೇಕು. 35ರಿಂದ 40 ದಿನದ ಬೆಳೆಯಲ್ಲಿ ಕುಡಿ ಚಿವುಟಬೇಕು. 20 ಪಿಪಿಎಂ ಎನ್‌ಎಎ ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.ಕಡಲೆಯಲ್ಲಿ ಕಾಯಿಕೊರಕದ ನಿರ್ವಹಣೆಗಾಗಿ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು(ಮಂಡಕ್ಕಿ) ಹೊಲದ ತುಂಬೆಲ್ಲಾ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ತಿನ್ನಲು ಪೋತ್ಸಾಹಿಸಿದಂತೆ ಆಗುತ್ತದೆ. ಈ ಕೀಡೆಯು ಸರಾಸರಿ ಶೇ. 40ರಿಂದ 50ರಷ್ಟು ಹಾನಿ ಮಾಡುತ್ತದೆ.
ಕೀಟನಾಶಕಗಳಾದ 2 ಮಿಲೀ ಕ್ಲೋರಫೆನಾಪೈರ್ 24 ಎಸ್‌ಸಿ ಅಥವಾ 0.075 ಮಿಲೀ ಫ್ಲೂಬೆಂಡಿಯಾಮೈಡ್ 39.35 ಎಸ್‌ಸಿ ಅಥವಾ ಕ್ಲೋರೆಂಟ್ರಿನಾ ಲಿಪ್ರೋಲ್ 18.5 ಎಸ್‌ಸಿ 0.15 ಮಿಲೀ ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ್ 5 ಎಸ್‌ಜಿ ಅಥವಾ 0.1 ಮಿಲೀ ಸ್ಪೈನೊಸ್ಯಾಡ್ 45 ಎಸ್‌ಸಿ ಅಥವಾ 0.3 ಮಿಲೀ ಇಂಡಾಕ್ಸಾಕಾರ್ಬ್ 14.5 ಎಸ್‌ಸಿ ಅಥವಾ 4 ಗ್ರಾಂ ಕಾರ್ಬರಿಲ್ 50 ಡಬ್ಲ್ಯುಪಿ ಅಥವಾ 1.0 ಮಿಲೀ ಮಿಥೈಲ್ ಪ್ಯಾರಾಥಿಯಾನ್ 50 ಇಸಿ ಅಥವಾ 2 ಮಿಲೀ ಕ್ವಿನಾಲ್‌ಫಾಸ್ 25 ಇಸಿ ಅಥವಾ 2 ಮಿಲೀ ಮಿಥೊಮಿಲ್ 40 ಎಸ್‌ಪಿ ಅಥವಾ 2 ಮಿಲೀ ಪ್ರೊಫೆನೋಫಾಸ್ 50 ಇಸಿ ಅಥವಾ 1 ಗ್ರಾಂ ಅಸಿಫೇಟ್ 75 ಎಸ್‌ಪಿ ಅಥವಾ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯವನ್ನು 20 ಮಿಲೀ ಅಥವಾ ಹೆಲಿಕೋವರ್ಪಾ ಎನ್‌ಪಿವಿ(ಎನ್‌ಬಿಎಐಆರ್) 2.0 ಮಿಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಕೀಟ ಹಾಗೂ ರೋಗ ಬಾಧೆಯ ಲಕ್ಷಣ ಕಂಡುಬಂದಲ್ಲಿ ಮಾತ್ರ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವ ಪ್ರದೇಶಗಳಲ್ಲಿ ಕೀಟ ಮತ್ತು ರೋಗದ ಬಾಧೆ ಪ್ರತಿವರ್ಷವೂ ತಪ್ಪದೇ ಬರುತ್ತದೆಯೋ ಅಂತಹ ಸಂದರ್ಭದಲ್ಲಿ ಕೀಟ ಹಾಗೂ ರೋಗಗಳು ಬರುವುದಕ್ಕೆ ಮೊದಲೇ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.