-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಕೆಮಿಕಲ್ ಕಂಪನಿಗಳಿಗೆ ಎಸಿ ಕಮೀಟಿ ಸಲಹೆ । ಕೈಗಾರಿಕೆಗಳಿಂದ ದುರ್ವಾಸನೆ ಹರಡದಂತೆ ಕ್ರಮ
-ಕನ್ನಡಪ್ರಭ ಸರಣಿ ವರದಿ ಭಾಗ : 138ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ದುರ್ನಾತ ತಡೆಗಟ್ಟಲು ಪ್ರತಿಯೊಂದು ಕಾರ್ಖಾನೆಗಳು ಸುಗಂಧ ದ್ರವ್ಯ ಸಿಂಪರಣೆ ಮಾಡಲು ಕ್ರಮವಹಿಸುವಂತೆ ಸೂಚಿಸಲಾಗಿದೆ.
ಆದರೆ, ಇದನ್ನು ಪಾಲಿಸಬೇಕಾದ ಕಂಪನಿಗಳು ಸುಗಂಧ ದ್ರವ್ಯ ಸಿಂಪರಣೆ ಮಾಡುವುದು ಒತ್ತೊಟ್ಟಿಗಿರಲಿ, ದುರ್ನಾತ ಮೊದಲಿಗಿಂತಲೂ ಹೆಚ್ಚು ಹರಡುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.ಸಹಾಯಕ ಆಯುಕ್ತರ ನೇತೃತ್ವದ ಕಮಿಟಿಯಲ್ಲಿನ ವರದಿಯಂತೆ, ಕೆಮಿಕಲ್ ಕಂಪನಿಗಳಿಗೆ ಹಾಗೂ ಸುತ್ತಮುತ್ತಲಿನ ಪರಿಸರ ಕಾಪಾಡುವಲ್ಲಿ ಶಿಫಾರಸು- ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅನೇಕ ಬಾರಿ ಸೂಚನೆ ನೀಡಿದ್ದರೂ, ಪಾಲಿಸದೇ ಇರುವುದು ಕಂಪನಿಗಳು ಮುಂದುವರೆದ ಉದ್ಧಟನಕ್ಕೆ ಸಾಕ್ಷಿಯಂತಿದೆ.
ಇನ್ನು, ಕೆಲವೊಂದು ಕಾರ್ಖಾನೆಗಳಲ್ಲಿ ದ್ರವ ತ್ಯಾಜ್ಯ ಸಂಗ್ರಹಣೆ ತೊಟ್ಟಿಗಳು ಮುಚ್ಚಿರುವುದಿಲ್ಲ, ಅದನ್ನು ತ್ವರಿತವಾಗಿ ಸೂಕ್ತ ಕ್ರಮವಹಿಸಲು ಸೂಚಿಸಬಹುದಾಗಿರುತ್ತದೆ ಎಂದು ಸೂಚಿಸಲಾಗಿದೆ.ಆದರೆ, ಕೆರೆಯಂಗಳದಷ್ಟು ವಿಶಾಲವಾದ ಪ್ರದೇಶದಲ್ಲಿ ಈ ಕೆಮಿಕಲ್ ತ್ಯಾಜ್ಯವನ್ನು ಮಳೆ ಬಂದ ವೇಳೆ ಚರಂಡಿಗಳ ಮೂಲಕ ಹಳ್ಳಕೊಳ್ಳಕ್ಕೆ ಬಿಡುವುದು ನಿಂತಿಲ್ಲ.
ಕಾರ್ಖಾನೆಯಿಂದ ಉತ್ಪತ್ತಿಯಾಗುವ ಗೃಹತಾಜ್ಯ ನೀರನ್ನು ಅಲ್ಲಿಯೇ ಸಂಸ್ಕರಣೆ ಅಥವಾ ಇಂಗು ಗುಂಡಿ ಮೂಲಕ ವಿಲೇಗೊಳಿಸುವುದು ಎಂಬ ಶಿಫಾರಸ್ಸನ್ನು ಗಾಳಿಗೆ ತೂರಿರುವ ಕಂಪನಿಗಳು, ಗೃಹತ್ಯಾಜ್ಯದ ನೆಪದಲ್ಲಿ ಕೆಮಿಕಲ್ ತ್ಯಾಜ್ಯ ಸೇರಿಸಿ ಚರಂಡಿ ಮೂಲಕ ನದಿಗೆ ಸಾಗಿಸುತ್ತಿದ್ದಾರೆ.ಕಾರ್ಖಾನೆಯವರು ಸಿ.ಎಸ್.ಆರ್ ಅಡಿಯಲ್ಲಿ ಸುತ್ತಲಿನ ಗ್ರಾಮಗಳಲ್ಲಿ ಕುಡಿವ ನೀರಿನ ಸೌಲಭ್ಯ, ರಸ್ತೆ ದುರಸ್ತಿ, ಬಸ್ ನಿಲ್ದಾಣ, ಆಸ್ಪತ್ರೆ ನಿರ್ಮಾಣ ಮಾಡುವುದು ಎಂಬ ಶಿಫಾರಸು ಕೇವಲ ಕಾಗದದಲ್ಲೇ ಎಂಬಂತಾಗಿದೆ. ದಶಕಗಳಿಂದ ಇದು ಪಾಲನೆಯಾಗದಿರುವುದು ವಿಚಿತ್ರ.
ಪ್ರಸ್ತುತ ಕೈಗಾರಿಕಾ ಪ್ರದೇಶದಲ್ಲಿರುವ ನಾಲಾ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮತ್ತು ಮಾಲಿನ್ಯ ಆಗದಂತೆ ಕ್ರಮವಹಿಸಬೇಕು. ಆದರೆ, ನಾಲಾಗಳ ಮೂಲಕವೇ ಇವರು ಕೆಮಿಕಲ್ ತ್ಯಾಜ್ಯ ಹೊರಬಿಡುತ್ತಾರೆ. ಕಾರ್ಖಾನೆಯ ಮುಂಭಾಗ ಕಡ್ಡಾಯ ಸಿ.ಸಿ ಟಿವಿ ಅಳವಡಿಸಿ ಯಾವುದೇ ಅಹಿತಕರ ಘಟನೆಯನ್ನು ಆಗದಂತೆ ತಡೆಗಟ್ಟುವುದು ಎಂಬ ಸೂಚನೆಯಿದೆ.ಆದರೆ, ಸಿಸಿಟಿವಿ ಅಳವಡಿಸಿದರೆ ಕೃತ್ಯಗಳು ಬಯಲಾಗುತ್ತವೆ ಎಂಬ ಕಾರಣದಿಂದ ಸಿಸಿಟಿವಿ ಇಲ್ಲಿ ಕಾಣುವುದೇ ಇಲ್ಲ.
ಎಸಿ ಕಮಿಟಿ ನೀಡಿರುವ ವರದಿಗಳು ಪಾಲನೆಯಾಗುವ ಬದಲು ಉಲ್ಲಂಘನೆಯಾಗುತ್ತಿವೆ. ರಾಜ್ಯಮಟ್ಟದ ತಂಡದ ಅಧಿಕಾರಿಗಳೇ ಬಂದು ಶಿಫಾರಸುಗಳು ಇದ್ದರೂ ಅವರುಗಳ ಬಗ್ಗೆ ಇವರು ತೋರಿರುವ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಮೌನ ನೋಡಿದರೆ ಒಳ ಒಪ್ಪಂದದ ಶಂಕೆ ಮೂಡಿದೆ ಎನ್ನುತ್ತಾರೆ ಸೈದಾಪುರ ವೀರಣ್ಣ.-
ಕೋಟ್- 1ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಂಪನಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಈ ಕಂಪನಿಗಳು ಗಾಳಿ ಮತ್ತು ಮಳೆಯ ನೀರಿನ ಜೊತೆಗೆ ತಮ್ಮ ರಾಸಾಯನಿಕ ತ್ಯಾಜ್ಯ ರಾಜಾರೋಷ ಹೊರಬಿಡುತ್ತಿದ್ದಾರೆ. ಈ ಬಗ್ಗೆ ಪರಿಸರ ಅಧಿಕಾರಿಗಳಿಗೆ ತಿಳಿದರೂ ಪ್ರಭಾವಕ್ಕೆ ಮಣಿದು ಪೂರಕ ವರದಿ ನೀಡಿದ್ದಾರೆ. ಈ ವಿಷಯ ಗಮನಿಸಿದರೆ ಜನಕ್ಕೆ ಆರೋಗ್ಯ ಸಮಸ್ಯೆ ಬಂದು ಸತ್ತರೂ ಪರವಾಗಿಲ್ಲ, ಜಲಚರಗಳ ಮಾರಣಹೋಮ ನಡೆದರೂ ಪರವಾಗಿಲ್ಲ, ಉದ್ಯಮಿಗಳ ಜೇಬು ತುಂಬಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇವುಗಳ ವಿರುದ್ಧ ದೊಡ್ಡ ಮಟ್ಟದ ಜನ ಆಂದೋಲವನ್ನು ಸಂಘಟಿಸುವುದು ಅವಶ್ಯಕವಾಗಿದೆ.
-ರಾಘವೇಂದ್ರ ಮಡಿವಾಳ್, ಕಿಲ್ಲನಕೇರಾ. (23ವೈಡಿಆರ್7)-
ಕೋಟ್- 2ನಮ್ಮ ಭಾಗದಲ್ಲಿ ಸ್ಥಾಪಿಸಿದ ಬಹುತೇಕ ಕೈಗಾರಿಕೆಗಳಿಂದ ಇಲ್ಲಿನ ಜನ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಹೀಗೆ ಮುಂದೆ ಸಾಗಿದರೆ, ನಮ್ಮ ಹಳ್ಳಿಗಳಿಲ್ಲಿ ಜನರ ಇರುವುದು ಕಷ್ಟ ಸಾಧ್ಯ. ಅದಕ್ಕಾಗಿ ಪ್ರಜ್ಞಾವಂತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಮಠಾಧೀಶರು ಈ ಭಾಗದ ಪ್ರತಿ ಗ್ರಾಮಗಳ ಗ್ರಾಮಸ್ಥರನ್ನು ಬೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
-ದೇವಿಂದ್ರಪ್ಪ ಮಕ್ತಲ, ಬಾಡಿಯಾಳ. (23ವೈಡಿಆರ್8)--
23ವೈಡಿಆರ್6 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.