ಅಧಿಕೃತ ಕೇಂದ್ರಗಳಿಂದಲೇ ಬೀಜ ಖರೀದಿಸಿ ಬಿತ್ತನೆ ಮಾಡಲು ಸೂಚನೆ

KannadaprabhaNewsNetwork |  
Published : Jun 07, 2026, 02:30 AM IST
ರೈತರ ತಾಲೂಕಿನಲ್ಲಿ ಮುಷ್ಟಗಟ್ಟೆ ಗ್ರಾಮದ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಯಲ್ಲಿ ತೊಡಗಿರುವ ರೈತರು. | Kannada Prabha

ಸಾರಾಂಶ

ಅನಧಿಕೃತ ಮಾರಾಟಗಾರರ ಬಳಿ ತಂದ ಬೀಜಗಳು ನೋಡಲು ಉತ್ತಮವಾಗಿ ಕಂಡರೂ ಸರಿಯಾಗಿ ಮೊಳಕೆಯೊಡೆಯುವುದಿಲ್ಲ.

ಕುರುಗೋಡು: ತಾಲೂಕಿನ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ಉತ್ತಮ ಬೀಜಗಳನ್ನು ತಂದು ಬಿತ್ತನೆ ಮಾಡಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ್ ಹೇಳಿದರು.

ಅನಧಿಕೃತ ಮಾರಾಟಗಾರರ ಬಳಿ ತಂದ ಬೀಜಗಳು ನೋಡಲು ಉತ್ತಮವಾಗಿ ಕಂಡರೂ ಸರಿಯಾಗಿ ಮೊಳಕೆಯೊಡೆಯುವುದಿಲ್ಲ. ಇನ್ನು ಕೆಲವೊಮ್ಮೆ ಮೊಳಕೆಯೊಡೆದರೂ ನಂತರ ಸಸಿಗಳು ಒಣಗಿ ಸಾಯುತ್ತವೆ. ತಜ್ಞರು ಶಿಫಾರಸು ಮಾಡಿದ ಔಷಧ ಸಿಂಪಡಿಸಿದರೂ ಸಹ ಇಳುವರಿ ಕಡಿಮೆಯಾಗುತ್ತಿದೆ. ಹೀಗಾಗಿ ರೈತರು ಅಧಿಕೃತ ಮಾರಾಟಗಾರರಿಂದಲೇ ಬೀಜ ಖರೀದಿಸಬೇಕು. ಬೀಜೋಪಚಾರ ಮಾಡದೇ ಬಿತ್ತನೆ ಮಾಡಬಾರದು ಎಂದರು.

ಮುಷ್ಟಗಟ್ಟೆ ಗ್ರಾಮದ ಮಳೆಯಾಶ್ರಿತ ಭೂಮಿಯಲ್ಲಿ ಉಳಿಮೆಯ ನಂತರ ರೈತರು ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿ ಹದಗೊಳಿಸಿದ್ದಾರೆ. ಈಗ ಬಿದ್ದಿರುವ ಮಳೆಯಿಂದ ತೊಗರಿ, ಹತ್ತಿ, ಸಜ್ಜೆ, ನವಣೆ ಮತ್ತು ಸೂರ್ಯಕಾಂತಿ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮನೆಗಳ ಮೂಲೆ ಸೇರಿದ್ದ ಕೃಷಿ ಪರಿಕರಗಳು ಹೊರ ಬಂದಿವೆ. ರೈತರು ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ನೀರಾವರಿ ಜಮೀನು ಹೊಂದಿದ ರೈತರು ಭೂಮಿಯಲ್ಲಿ ಬೆಳೆದ ಗಿಡಗಂಟೆಗಳನ್ನು ಸ್ವಚ್ಛಗೊಳಿಸುವ, ಕೊಟ್ಟಿಗೆಗೊಬ್ಬರ ಬೆರೆಸುವುದು ಸೇರಿದಂತೆ ಪೂರಕ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ರಿಯಾಯಿತಿ ದರದಲ್ಲಿ ಬೀಜ:

ತಾಲೂಕಿನಲ್ಲಿ ೬,೮೦೦ ಹೆಕ್ಟೇರ್ ಮಳೆಯಾಶ್ರಿತ ಮತ್ತು ೨೨ ಸಾವಿರ ಹೆಕ್ಟೇರ್ ನೀರಾವರಿ ಭೂಮಿ ಇದೆ. ೨೮ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿದೇಶಕ ಗರ್ಜೆಪ್ಪ ತಿಳಿಸಿದರು.

ತಾಲೂಕಿನ ಕುರುಗೋಡು ಮತ್ತು ಕೋಳೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಲು ಸಜ್ಜೆ, ನವಣೆ, ತೊಗರಿ, ಮೆಕ್ಕಜೋಳ ಮತ್ತು ಸೂರ್ಯಕಾಂತಿ ಬೀಜ ದಾಸ್ತಾನು ಲಭ್ಯವಿದೆ. ನೀರಾವರಿ ಭೂಮಿಯಲ್ಲಿ ಬಿತ್ತನೆಗೆ ಆರ್.ಎನ್.ಆರ್. ಮತ್ತು ಸೋನಾ ಮಸೂರಿ ತಳಿಯ ಭತ್ತದ ಬೀಜ ದಾಸ್ತಾನಿದೆ. ಬಹುತೇಕ ಕೃಷಿ ಪರಿಕರಗಳ ಮಾರಾಟಗಾರರು ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದಾರೆ. ಈ ವರ್ಷ ರೈತರಿಗೆ ಯಾವುದೇ ಕೊರತೆಯಾಗುವುದಿಲ್ಲ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ್.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.೭೫ರಷ್ಟು, ಸಾಮಾನ್ಯ ವರ್ಗದ ರೈತರಿಗೆ ಶೇ.೫೦ರ ರಿಯಾಯಿತಿ ದರಯಲ್ಲಿ ಬೀಜ ವಿತರಣೆ ಮಾಡಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಖರೀದಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30ರಿಂದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ
ಏಕರೂಪ ಬೀಜ ದರ ನಿಗದಿಗೆ ಒತ್ತಾಯ