ಹೊಸಪೇಟೆ: ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಚಂದ್ರಯ್ಯ ಸ್ವಾಮಿ ಅವರ ಹೊಲವೊಂದರಲ್ಲಿದ್ದ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನ ಪತ್ತೆಯಾಗಿದೆ.
ಈ ಶಾಸನವು ಗ್ರಾನೈಟ್ ಕಲ್ಲಿನಲ್ಲಿ ಬರೆಯಲಾಗಿದೆ. 15 ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರವಾಗಿದ್ದು, ಒಂದೂವರೆ ಅಡಿ ಅಗಲವಾಗಿದೆ. ಮೊದಲ ಸಾಲಿನಲ್ಲೇ ರಾಜನ ಹೆಸರನ್ನು ನಮೂದಿಸಲಾಗಿದೆ. ಹೊಯ್ಸಳರ ನರಸಿಂಹ ಚಕ್ರವರ್ತಿಯ ಕಾಲಾವಧಿಯಲ್ಲಿ ಗುಂಡ್ಲವದ್ದಿಗೆರೆಯನ್ನು ಕಾಸಿಗೌಡನು ಆಳ್ವಿಕೆ ನಡೆಸುತ್ತಿದ್ದ. ಆತ ಒಂದು ಕೆರೆ ಕಟ್ಟಿಸಿದುದಲ್ಲದೇ ದೇಗುಲಕ್ಕೆ ಜಾಗಟೆ, ಕೊಳಗ ನೀಡಿರುವ ಕುರಿತಾಗಿದೆ. ಇದರಿಂದ ಜಿಲ್ಲೆಯಲ್ಲಿ ಹೊಯ್ಸಳ ಅರಸರ ಆಳ್ವಿಕೆ ಇತ್ತೆಂದು ತಿಳಿದುಬರುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಎಚ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಈ ದಾನ ಶಾಸನದಲ್ಲಿ ವಿಶೇಷವಾಗಿ ಬಡಗೇರರ ವೃತ್ತಿ ಉಲ್ಲೇಖವಿದೆ. ಕಾಸಿಗೌಡನು ಸಂಣಯನ ಮಗನಾದ ಬಡಗಿ ನಾಗಭೋಜನಿಗೆ ಹೊಲವೊಂದನ್ನು ದಾನ ನೀಡಿರುವ ವಿವರವಿದೆ. ಶಾಸನದಲ್ಲಿ ಸರ್ವಮಾನ್ಯ ಹೊಲ ಎಂದಿರುವುದರಿಂದ ಯಾವುದೇ ರೀತಿಯ ತೆರಿಗೆ ಕಟ್ಟುವಂತಿರಲಿಲ್ಲ ಎಂದು ತಿಳಿಯುತ್ತದೆ.ಜೊತೆಗೆ ಸೂರ್ಯ, ಚಂದ್ರ, ನಕ್ಷತ್ರ ಇರುವವರೆಗೂ ಶಾಸನ ಇರಲಿ ಎಂದು ಶಾಪಾಶಯವು, ಹಾಗೆ ದಾನ ನೀಡುವುದನ್ನು ತಪ್ಪಿಸಬಾರದೆಂಬ ಸಾಲುಗಳು ಶಾಸನದಲ್ಲಿ ಬರೆಸಲಾಗಿದೆ. ಇದೇ ರೀತಿ ಕಾಕುಬಾಳು ಕ್ರಾಸ್ ನ ಗುಂಡ್ಲವದ್ದಿಗೆರೆಯ ಚಂದ್ರಪ್ಪನವರ ಹೊಲವೊಂದರಲ್ಲಿ ಕುಂಬಾರ ಪೊನ್ನಿಮಯ್ಯನ ಮಗ ಯಂಕಬಿಯನ ಹೆಸರಲ್ಲಿ ಕಟ್ಟಿಸಿದ ಕೆರೆ ಎಂಬ ಅಪ್ರಕಟಿತ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡವು ಈ ಹಿಂದೆ ಪತ್ತೆ ಮಾಡಲಾಗಿತ್ತು. ಆ ಶಾಸನದಲ್ಲಿ ಕುಂಬಾರರ ವೃತ್ತಿ ಪ್ರಸ್ತಾಪಿಸಲಾಗಿದೆ.
ಈ ಶಾಸನವು ಹೊಲವೊಂದರಲ್ಲಿ ಬಿಸಿಲು ಗಾಳಿ ಮಳೆಯಿಂದ ರಕ್ಷಣೆ ಇಲ್ಲದೇ ಇರುವುದರಿಂದ ಅಕ್ಷರಗಳು ಸವೆದು ಹೋಗಿವೆ. ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯು ಇಂತಹ ನಿರ್ಲಕ್ಷಿತ ಶಾಸನಗಳ ರಕ್ಷಣೆ ಮಾಡಬೇಕೆಂದು ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.