ಬೆಂಗಳೂರು: ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನಡೆಯುವ ಪೊಲೀಸ್ ಇಲಾಖೆ ನೇಮಕಾತಿ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 70 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಮುಂಬರುವ ನೇಮಕಾತಿ ಪರೀಕ್ಷೆಗಳ ಸಿದ್ಧತೆ ಕುರಿತು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಪರಿಶೀಲನಾ ಗುರುವಾರ ಸಭೆ ನಡೆಯಿತು.
ನೇಮಕಾತಿ ಪ್ರಾಧಿಕಾರಗಳಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗದ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಜಿಲ್ಲಾವಾರು ಸಿದ್ಧತೆಯನ್ನೂ ಪರಿಶೀಲಿಸಿದ ಕಟಾರಿಯಾ ಅವರು, ಪರೀಕ್ಷೆಗಳು ಶಾಂತಿಯುತ, ಸುರಕ್ಷಿತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಯುವಂತೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸೂಚಿಸಿದರು. ಪ್ರಶ್ನೆಪತ್ರ ಸೋರಿಕೆ, ನಕಲಿ ಅಭ್ಯರ್ಥಿಗಳು, ಸಂಘಟಿತ ನಕಲು, ಎಲೆಕ್ಟ್ರಾನಿಕ್ ಸಾಧನಗಳ ದುರ್ಬಳಕೆ ಸೇರಿ ಯಾವುದೇ ಅಕ್ರಮಗಳ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು.
- ಕಟಾರಿಯಾ ನೇತೃತ್ವದ ಉನ್ನತ ಮಟ್ಟದ ಸಭೆ
ಪೊಲೀಸ್ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿಯಂತೆ ಆ.2ರಂದು 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು, ಸೆ. 6ರಂದು 1,600 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು ಹಾಗೂ ಸೆ. 20ರಂದು ಕೆಎಸ್‌ಆರ್‌ಪಿ, ಐಆರ್‌ಬಿ ಮತ್ತು ಕೆಎಸ್‌ಐಎಸ್‌ಎಫ್‌ನ 2,314 ವಿಶೇಷ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಸುರಕ್ಷಿತವಾಗಿ ನಡೆಸಿ ಎಲ್ಲ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಬದ್ಧತೆಯನ್ನು ಗೃಹ ಇಲಾಖೆ ಸೂಚಿಸಿದೆ.
ಸೈಬರ್ ಅಪರಾಧ ವಿಭಾಗ ಹಾಗೂ ಗುಪ್ತಚರ ಘಟಕಗಳಿಗೆ ಡಿಜಿಟಲ್ ವೇದಿಕೆಗಳ ಮೇಲೆ ನಿಗಾ ವಹಿಸಿ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಭದ್ರತೆ, ಗೌಪ್ಯ ಪರೀಕ್ಷಾ ಸಾಮಗ್ರಿಗಳ ಸುರಕ್ಷಿತ, ಸಾಗಣೆ ಮತ್ತು ಸಂರಕ್ಷಣೆ, ಸಮರ್ಪಕ ಪೊಲೀಸ್ ಬಂದೋಬಸ್ತ್, ಸಂಚಾರ ನಿರ್ವಹಣೆ, ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಹಾಗೂ ಹಿರಿಯ ಅಧಿಕಾರಿಗಳ ನಿರಂತರ ಮೇಲ್ವಿಚಾರಣೆಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದರು.
ಕಠಿಣ ಕ್ರಮ
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದು, ಕರ್ನಾಟಕ ಸಾರ್ವಜನಿಕ ಪರೀಕ್ಷೆ (ಭ್ರಷ್ಟಾಚಾರ ಮತ್ತು ಅನ್ಯಾಯಕರ ವಿಧಾನಗಳ ತಡೆ) ಅಧಿನಿಯಮ, 2023ರಡಿ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.
ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕ (ನೇಮಕಾತಿ) ಉಮೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ, ಕಂದಾಯ ಆಯುಕ್ತೆ ಮೀನಾ ನಾಗರಾಜ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
