ಭಯವು ಕಂಪ್ಯೂಟರ್‌ಗೆ ತಗುಲುವ ವೈರಸ್‌ನಂತಿದ್ದು, ಅದು ಮನಸ್ಸನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಯಾವುದೇ ಪರೀಕ್ಷೆಯನ್ನು ಭಯವಿಲ್ಲದೆ, ಶಾಂತಚಿತ್ತದಿಂದ ಎದುರಿಸಬೇಕು.
ಹುಬ್ಬಳ್ಳಿ:
ಪರೀಕ್ಷೆಯ ಭಯವನ್ನು ಮನಸ್ಸಿನಿಂದ ದೂರ ಮಾಡಿ ಆತ್ಮವಿಶ್ವಾಸದಿಂದ ಎದುರಿಸಿದರೆ ಯಶಸ್ಸು ಖಚಿತ. ಅಂಕಗಳಿಗಿಂತ ಉತ್ತಮ ವ್ಯಕ್ತಿತ್ವ, ಮಾನವೀಯ ಮೌಲ್ಯ ಮತ್ತು ಬದುಕಿನ ಮೇಲಿನ ಪ್ರೀತಿ ಮುಖ್ಯ ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.ಇಲ್ಲಿನ ಗೋಕುಲ ರಸ್ತೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಇಂಪಲ್ಸ್ ಪಿಯು ವಿಜ್ಞಾನ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ "ಆರಂಭ-2026 " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಯವು ಕಂಪ್ಯೂಟರ್‌ಗೆ ತಗುಲುವ ವೈರಸ್‌ನಂತಿದ್ದು, ಅದು ಮನಸ್ಸನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಯಾವುದೇ ಪರೀಕ್ಷೆಯನ್ನು ಭಯವಿಲ್ಲದೆ, ಶಾಂತಚಿತ್ತದಿಂದ ಎದುರಿಸಬೇಕು. ನಿಮಗೆ ತಿಳಿದಿರುವುದನ್ನು ಆತ್ಮವಿಶ್ವಾಸದಿಂದ ಬರೆದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.ಪರೀಕ್ಷೆ ಇರಲಿ ಅಥವಾ ಇರದಿರಲಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನ ಕನಿಷ್ಠ ಎರಡರಿಂದ ಮೂರು ಗಂಟೆ ಅಧ್ಯಯನ ಮಾಡಬೇಕು. ವಿದ್ಯಾರ್ಥಿಯ ಪ್ರಮುಖ ಕರ್ತವ್ಯ ಜ್ಞಾನ ಸಂಪಾದನೆ. ಆದ್ದರಿಂದ ಮನಸ್ಸನ್ನು ಬೇರೆಡೆಗೆ ತಿರುಗಿಸದೆ ಗುರಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಅಂಕಗಳ ಬಗ್ಗೆ ಮಾತ್ರ ಯೋಚಿಸದೆ ಆರೋಗ್ಯಕರ ಜೀವನ, ಉತ್ತಮ ಮಾನವೀಯ ಮೌಲ್ಯ ಹಾಗೂ ದೇಶಭಕ್ತಿ ಬೆಳೆಸಿಕೊಳ್ಳಬೇಕು. ಸಮಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.ಅತಿಥಿಗಳಾಗಿ ಆಗಮಿಸಿದ್ದ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ನಿವೃತ್ತ ಸ್ಥಾನಿಕ ನಿರ್ದೇಶಕ ಪ್ರಮೋದ ರಾಯಚೂರ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಮಹಾನ್ ವ್ಯಕ್ತಿಯನ್ನು ಆದರ್ಶವಾಗಿ ಆಯ್ಕೆ ಮಾಡಿಕೊಂಡು, ಸ್ಪಷ್ಟವಾದ ಗುರಿ ಹೊಂದಬೇಕು. ದೇಶದ ರಕ್ಷಣೆಗೆ ಸೈನಿಕರು, ದೇಶದ ಅಭಿವೃದ್ಧಿಗೆ ರಾಜಕಾರಣಿಗಳು, ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು ಹಾಗೂ ಕ್ರೀಡಾಪಟುಗಳು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರಲ್ಲಿ ಯಾರನ್ನಾದರೂ ನಿಮ್ಮ ಆದರ್ಶ ವ್ಯಕ್ತಿಯಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕ್ಷಣಕಾಲ ಕಣ್ಣು ಮುಚ್ಚಿ, ತಮಗೆ ಪ್ರೇರಣೆ ನೀಡುವ ವ್ಯಕ್ತಿಯನ್ನು ನೆನಪಿಸಿಕೊಳ್ಳಬೇಕು. ಆ ವ್ಯಕ್ತಿಯನ್ನೇ ತಮ್ಮ ಜೀವನದ ಆದರ್ಶವನ್ನಾಗಿ ಮಾಡಿಕೊಂಡು, ಅದನ್ನು ಸಾಧಿಸುವ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಯಶಸ್ಸು ಪಡೆಯಲು ಆತ್ಮವಿಶ್ವಾಸ, ದೃಢಸಂಕಲ್ಪ ಹಾಗೂ ನಿರಂತರ ಪರಿಶ್ರಮ ಅಗತ್ಯ. ಸ್ಪಷ್ಟವಾದ ಗುರಿಯೊಂದಿಗೆ ಮುನ್ನಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಗಳಾಗುತ್ತಾರೆ ಎಂದರು.ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಉಜ್ವಲ್ ದಲಬಂಜನ, ದ್ವಿತೀಯ ಸ್ಥಾನ ಪಡೆದ ಅಮೂಲ್ಯ ತೆಗ್ಗಿ, ತೃತೀಯ ಸ್ಥಾನ ಪಡೆದ ಚಿರಾಗ್ ಪೂಜಾರ ಅವರನ್ನು ಸನ್ಮಾನಿಸಲಾಯಿತು. ಶ್ರೀದೇವಿ ಶಿವಯೋಗಿಮಠ, ಅಭಿಷೇಕ ಶಿವಯೋಗಿಮಠ, ಪೂಜಾ ಶಿವಯೋಗಿಮಠ, ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಸ್.ಬಿ. ಹಿರೇಮಠ, ಪ್ರಾಚಾರ್ಯ ಬಸವರಾಜ ಚಿನಿವಾಲರ ಸೇರಿದಂತೆ ಹಲವರಿದ್ದರು.