ಹುಬ್ಬಳ್ಳಿ:
ಪೂರ್ವ ಪ್ರಾಥಮಿಕ ಶಾಲೆಯ ಪರವಾನಗಿ ಪಡೆದು 1ರಿಂದ 8 ತರಗತಿ ನಡೆಸುತ್ತಿರುವ ಇಲ್ಲಿನ ಗುರುನಾಥನಗರದ ಬ್ಯಾಹಟ್ಟಿ ಪ್ಲಾಟ್‌ನ "ಬ್ರೈನಿಸ್ಟಾರ್ ಪೂರ್ವ ಪ್ರಾಥಮಿಕ ಶಾಲೆ "ಗೆ ಬಿಇಒ ಕಚೇರಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈ ನಡುವೆ ಇದೇ ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದು, ಆ ಜಾಗೆಯನ್ನು ಹುಡಾ ಮರಳಿ ಪಡೆಯಬೇಕು ಎಂದು ಅಲ್ಲಿನ ಸಾರ್ವಜನಿಕರು ಆಗ್ರಹಿಸಿ ಮನವಿ ಕೂಡ ಸಲ್ಲಿಸಿದ್ದಾರೆ.ಏಕೀ ನೋಟಿಸ್?
ಗುರುನಾಥ ನಗರದಲ್ಲಿ ಬ್ರೈನಿ ಸ್ಟಾರ್ ಎಂಬ ಹೆಸರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಪರವಾನಗಿ ಪಡೆಯಲಾಗಿದೆ. ಆದರೆ, ಅದೇ ಜಾಗೆದಲ್ಲಿ 1ರಿಂದ 8ನೇ ತರಗತಿಯನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ. ಇದರ ನಡುವೆ ಅದೇ ಜಾಗದಲ್ಲಿ ಟ್ರಿನಿಟಿ ಎಂಬ ಶಾಲೆಯ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಅಗತ್ಯ ತರಗತಿ ನಡೆಸಲು ಕೊಠಡಿಗಳು ಇಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.ಈ ಹಿನ್ನೆಲೆಯಲ್ಲಿ ನಿಯಮಬಾಹಿರವಾಗಿ ತರಗತಿ ನಡೆಸುತ್ತಿರುವುದು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಉಲ್ಲಂಘನೆಯಾಗಿದೆ. ಆದ ಕಾರಣ ನಿಮ್ಮ ಶಾಲೆಗೆ ದಂಡ ವಿಧಿಸಬಹುದಾಗಿದೆ. ಅನಧಿಕೃತ ತರಗತಿ ನಡೆಸುತ್ತಿರುವುದಕ್ಕೆ ಶಾಲೆಗೆ ನೀಡಿರುವ ಮಾನ್ಯತೆಯನ್ನು ಏಕೆ ಹಿಂಪಡೆಯಬಾರದು? ಎಂದು ಪ್ರಶ್ನಿಸಿದೆ. ಈ ನೋಟಿಸ್‌ಗೆ ಎರಡು ದಿನಗಳಲ್ಲಿ ಖುದ್ದಾಗಿ ಕಚೇರಿಗೆ ಉತ್ತರ ನೀಡಬೇಕು ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಪಡ್ನೀಸ್ ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿವೇಶನ ಹಿಂಪಡೆಯಲು ಆಗ್ರಹ:
ಈ ನಡುವೆ ಇದೇ ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದು, ಪಕ್ಕದಲ್ಲೇ "ಪ್ರಿಯದರ್ಶಿನಿ ಕನ್ನಡ ಮಾಧ್ಯಮ ಶಾಲೆ " ಇದೆ. ಈ ಶಾಲೆ ನಿರ್ಮಾಣವಾದರೆ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಂತಾಗುತ್ತದೆ. ಜತೆಗೆ ನಿರ್ಮಿಸುತ್ತಿರುವ ಶಾಲಾ ಕಟ್ಟಡದ ಜಾಗೆ ಸಿಎ ನಿವೇಶನವಾಗಿದ್ದು, ಉದ್ಯಾನವನಕ್ಕೆಂದು ಮೀಸಲಿಟ್ಟಿರುವ ಜಾಗೆಯಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಬೇಕೆಂದು ಕೋರಿದಾಗ ಬಡಾವಣೆ ಸಿಸಿ ಆಗಿಲ್ಲ. ಪಾಲಿಕೆಗೆ ಹಸ್ತಾಂತರವಾಗಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿತ್ತು. ಇದೀಗ ಅದೇ ಜಾಗವನ್ನು ಸಂಸ್ಥೆಯೊಂದಕ್ಕೆ ಹಂಚಿಕೆ ಮಾಡಿರುವುದು, ಅಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ಖಂಡನೀಯ. ಕೂಡಲೇ ಶಿಕ್ಷಣ ಸಂಸ್ಥೆಗೆ ಹಂಚಿಕೆ ಮಾಡಿರುವುದನ್ನು ರದ್ದುಪಡಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಗ್ರಂಥಾಲಯಕ್ಕೆ ಹಂಚಿಕೆ ಮಾಡಬೇಕು. ಇದರಿಂದ ಆ ಬಡಾವಣೆ ಜನರಿಗೆ ಅನುಕೂಲವಾಗುತ್ತದೆ ಎಂದು ಅಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.
