ಕೊಪ್ಪಳ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ಜಿಲ್ಲಾ,ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟಗಳಲ್ಲಿ ಪ್ರತ್ಯೇಕ ಉಸ್ತುವಾರಿ ನೇಮಿಸಿ ಪಕ್ಷ ಸಂಘಟನೆ ಬಲಪಡಿಸಲು ಕೊಪ್ಪಳ ಜಿಲ್ಲಾ ಜೆಡಿಎಸ್ ಘಟಕ ತೀರ್ಮಾನಿಸಿದೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶದಿಂದ ಪ್ರತಿ ಹಂತದಲ್ಲೂ ಪ್ರತ್ಯೇಕ ಉಸ್ತುವಾರಿ ನೇಮಿಸಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳನ್ನು ಈಗಿನಿಂದಲೇ ಗುರುತಿಸಿ ಪೂರ್ವ ಸಿದ್ಧತೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಡೆದಿರುವ ಸದಸ್ಯತ್ವ ನೋಂದಣಿ ಅಭಿಯಾನ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಇದನ್ನು ಮತ್ತಷ್ಟು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳಾಗುತ್ತಿರುವ ವರದಿ ಹಿನ್ನೆಲೆಯಲ್ಲಿ ಬಿಎಲ್‌ಎಗಳು ಹೆಚ್ಚು ಜಾಗೃತಿಯಿಂದ ಕಾರ್ಯ ನಿರ್ವಹಿಸಿ ಪಕ್ಷದ ಹಿತಾಸಕ್ತಿ ಕಾಪಾಡಬೇಕು ಎಂದು ಹೇಳಿದರು.ಕೊಪ್ಪಳ ಸೇರಿದಂತೆ ಹಲವು ತಾಲೂಕುಗಳಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಉತ್ತಮ ಮಳೆಯಾಗಲೆಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಪಕ್ಷದ ಮುಖಂಡರು ತೀರ್ಮಾನಿಸಿದರು.
ತಾಲೂಕು ಗೌರವಾಧ್ಯಕ್ಷ ಈಶಪ್ಪ ಮಾದಿನೂರು ಮಾತನಾಡಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಪ್ಪಳ ಜಿಲ್ಲೆಗೆ ನಾಲ್ಕು ಸರ್ಕಾರಿ ಕಾಲೇಜು ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡಿದ್ದರು ಎಂದು ಸ್ಮರಿಸಿದರು. ರೈತರ ಸಂಕಷ್ಟ ಅರಿತು ಕೃಷಿ ಸಾಲಮನ್ನಾ ಜಾರಿಗೊಳಿಸಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮಾತನಾಡಿ, ಕೊಪ್ಪಳದಲ್ಲಿ ಜೆಡಿಎಸ್ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಈಗಿನಿಂದಲೇ ಸಿದ್ಧರಾಗಬೇಕು ಎಂದರು.
ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರು ಬರ ಪರಿಹಾರ ಕಾಮಗಾರಿಗಳಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.ಅಲ್ಪಸಂಖ್ಯಾತ ಘಟಕದ ಮುಖಂಡ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ಮಾತನಾಡಿ, ಅಲ್ಪಸಂಖ್ಯಾತರು ಜೆಡಿಎಸ್‌ನಿಂದ ದೂರವಾಗಿದ್ದಾರೆ ಎಂಬುದು ಸುಳ್ಳು ಪ್ರಚಾರವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಇಂದಿಗೂ ಗೌರವವಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಪಕ್ಷ ಸಂಘಟನೆ, ನೇಮಕಾತಿ, ಬರ ಪರಿಸ್ಥಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ರಾಜ್ಯ ನಾಯಕರ ಬರ ಅಧ್ಯಯನ ಭೇಟಿ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಘಟಕಗಳ ಪದಾಧಿಕಾರಿ, ಮಹಿಳಾ, ಯುವ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.