24ರ ವರೆಗೆ ನ್ಯಾಯಾಂಗ ಸೆರೆ । ಜೆಎಂಎಫ್‌ಸಿ ಕೋರ್ಟ್ ಆದೇಶ
ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಯಾಗಿರುವ ವಕೀಲ ದೇವರಾಜೇಗೌಡರನ್ನು ಮೇ ೨೪ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ವಕೀಲ ದೇವರಾಜೇಗೌಡ ವಿರುದ್ಧ ಏಪ್ರಿಲ್ ಒಂದರಂದು ನೀಡಿದ್ದ ಲೈಂಗಿಕ ದೌರ್ಜನ್ಯ ದೂರು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪರಸ್ಥಳಕ್ಕೆ ತೆರಳುತ್ತಿದ್ದ ವಕೀಲ ದೇವರಾಜೇಗೌಡರನ್ನು ಹಿರಿಯೂರಿನಲ್ಲಿ ಬಂಧಿಸಿ, ಶನಿವಾರ ಸಂಜೆ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದಾಗ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ಸಿದ್ಧರಾಮ ಎಸ್. ೧೪ ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.ಮೇ ೧೩ ರಂದು ಬೆಳಗ್ಗೆ ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ಪರಿಗಣಿಸಿ, ಎರಡು ದಿನ ಪೊಲೀಸ್ ಕಸ್ಟಡಿಗೆ ಆದೇಶ ನೀಡಲಾಗಿತ್ತು. ಪುನಃ ಗುರುವಾರ ಬೆಳಿಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಒಂದು ದಿನ ವಿಸ್ತರಣೆಗೆ ಮನವಿ ಸಲ್ಲಿಸಿ, ನ್ಯಾಯಾಲಯದ ಆದೇಶದಂತೆ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಶುಕ್ರವಾರ ಬೆಳಿಗ್ಗೆ ನ್ಯಾಯಾಧೀಶರು ವಕೀಲ ದೇವರಾಜೇಗೌಡರನ್ನು ಮೇ ೨೪ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.