ಧಾರವಾಡ: ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೀಸಲಿಟ್ಟಿದ್ದ 1,777 ಎಕರೆ ಕೃಷಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರಿಗೆ ನೆರವಾಗುವಂತೆ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟದಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣ ರಾಜ್ಯದ ಆರ್ಥಿಕತೆ ಹಾಗೂ ಹೇರಳವಾಗಿ ಉದ್ಯೋಗ ಸೃಷ್ಟಿಸಲು ಅತ್ಯಂತ ಮಹತ್ವದ್ದು. ಆದರೆ, ಭೂ ಸ್ವಾಧೀನಕ್ಕೆ ರೈತರು ವಿರೋಧಿಸಿದ ಕಾರಣ ಉದ್ಯಮ ಸ್ಥಾಪನೆಗೆ ಅಡೆತಡೆ ಎದುರಾಗಿದೆ. ತಾವು ಈ ಪಾರ್ಕ್ ಅನ್ನು ಕರ್ನಾಟಕದಲ್ಲೇ ಸ್ಥಾಪನೆ ಮಾಡಲು ಅಚಲ ನಿರ್ಧಾರ ಹೊಂದಿದ್ದೀರಿ ಎಂಬ ನಂಬಿಕೆಯೂ ಇದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಬೇಕು. ಇಲ್ಲಿ ಉದ್ಯಮ ಸ್ಥಾಪನೆಗೆ ಅಗತ್ಯವಾಗಿರುವ ಭೂಮಿ, ಅಗತ್ಯ ಮೂಲ ಸೌಕರ್ಯ, ಕೌಶಲಪೂರ್ಣ ಮಾನವ ಸಂಪನ್ಮೂಲದ ಜತೆಗೆ ಉದ್ಯಮಕ್ಕೆ ಅಗತ್ಯವಾಗಿರುವ ಅನುಕೂಲಕರ ವಾತಾವರಣ ಇದೆ.ಪಾರ್ಕ್ ಸ್ಥಾಪನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾಗಿ ಉದ್ಯೋಗ ಸೃಷ್ಟಿಯೂ ಮಾಡಿದಂತಾಗುತ್ತದೆ. ಈ ಭಾಗದಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪನೆಯಿಂದ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೂಡಿಕೆದಾರರು ಈ ಭಾಗದಲ್ಲಿ ತಮ್ಮ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒಲವು ತೋರುತ್ತಾರೆ. ಇದರಿಂದ ಬಂಡವಾಳ ಹೂಡಿಕೆಯಲ್ಲೂ ಹೆಚ್ಚಳ ಕಾಣಲಿದೆ. ಈ ಪಾರ್ಕ್ ಅನ್ಯ ರಾಜ್ಯಗಳ ಪಾಲಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕೂ ಇದೆ. ಹೀಗಾಗಿ ಕೂಡಲೇ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲು ಮತ್ತು ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲು ಬೆಲ್ಲದ ಆಗ್ರಹಿಸಿದರು.