ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಬಸ್ ಘಟಕದ ಚಾಲಕ/ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಚಿದಾನಂದ ಹೋಳಿಕೇರಿ (52) ಮನೆಯಲ್ಲಿ ಪತ್ನಿಯೊಂದಿಗೆ ವಾಗ್ವಾದ ಮಾಡಿದ್ದಕ್ಕೆ ಪತ್ನಿ ಮುನಿಸಿಕೊಂಡು ಮಧ್ಯರಾತ್ರಿ ವೇಳೆ ಮನೆಯಿಂದ ಅಫಜಲ್ಪುರ ಬಸ್ ನಿಲ್ದಾಣದ ಕಡೆ ಬಂದಾಗ ಅನುಮಾನಗೊಂಡ ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಪತಿಯೊಂದಿಗೆ ಆದ ಕಲಹದ ಬಗ್ಗೆ ವಿವರಿಸಿದ್ದಾರೆ. ಇದನ್ನೆ ಗುರಿಯಾಗಿಸಿಕೊಂಡ ಪೊಲೀಸರು ಚಾಲಕ/ನಿರ್ವಾಹಕ ಚಿದಾನಂದನಿಗೆ ಠಾಣೆಗೆ ಕರೆಸಿ ಪತ್ನಿಯ ಎದುರಲ್ಲಿ ಮನೋಇಚ್ಛೆ ಥಳಿಸಿದ ಘಟನೆ ನಡೆದಿದೆ.ಪೊಲೀಸರ ಥಳಿತಕ್ಕೆ ಚಿದಾನಂದ ಹೋಳಿಕೇರಿ ಅವರ ಕಿವಿಗಳು ಕೇಳದಂತಾಗಿವೆ. ಅಲ್ಲದೆ ಮೈಕೈಗಳಿಗೆಲ್ಲ ಬಾಸುಂಡೆ ಬಂದಿದ್ದು ಕರ್ತವ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಘಟನೆ ನಡೆದ ಮೂರ್ನಾಲ್ಕು ದಿನಗಳಾದರೂ ಚಾಲಕ/ನಿರ್ವಾಹಕ ಚಿದಾನಂದ ಅವರ ಕಿವಿಗಳು ಕೇಳುತ್ತಿಲ್ಲ. ಘಟನೆ ಕುರಿತು ಚಿದಾನಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮನೆ ಎಂದಾಗ ಜಗಳ ಸಹಜ, ನನಗೆ ಒಬ್ಬನೆ ಮಗನಿದ್ದಾನೆ. ನಾನು ಕರ್ತವ್ಯಕ್ಕೆ ಹೋಗಿ ಮನೆಗೆ ಬಂದು ಮಗನ ಚಲನವಲನ ನೋಡಲಾಗುತ್ತಿಲ್ಲ. ಹೇಳದೆ ಕೇಳದೆ ಪುಣೆಗೆ ಹೋಗಿದ್ದಾನೆ ಎಂದು ತಿಳಿಯಿತು. ಅವನ ಮೇಲೆ ನಿಗಾ ಇಡು. ಒಳ್ಳೆಯ ಸಂಸ್ಕಾರ ನೀಡು ಎಂದು ಪತ್ನಿಯೊಂದಿಗೆ ವಾಗ್ವಾದ ಮಾಡಿದ್ದೇನೆ. ಅದನ್ನೇ ಕಾರಣವಾಗಿಟ್ಟುಕೊಂಡು ಪತ್ನಿ ಮನೆಯಿಂದ ಹೊರ ಹೋಗಿದ್ದಾಳೆ. ಆಗ ಅಫಜಲ್ಪುರ ಠಾಣೆ ಪೊಲೀಸರು ನನ್ನ ಪತ್ನಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಬಳಿಕ ನನ್ನನ್ನು ಕರೆತಂದು ಮನಸೋ ಇಚ್ಛೆ ಥಳಿಸಿದ್ದಾರೆ. ಬೂಟುಗಾಲಿನಲ್ಲಿ ಒದ್ದಿದ್ದರಿಂದ ಕಾಲಿಗೆ ಪೆಟ್ಟಾಗಿದ್ದು ಸರಿಯಾಗಿ ನಡೆಯಲಾಗುತ್ತಿಲ್ಲ. ಕಿವಿಯ ಮೇಲೆ ಹೊಡೆದಿದ್ದಾರೆ ಇದರಿಂದಾಗಿ ನನಗೆ ಕಿವಿ ಕೇಳದಂತಾಗಿದೆ. ಹೀಗಾಗಿ ಆಸ್ಪತ್ರೆಯ ಎದುರು ಬಸ್ ನಿಲ್ಲಿಸಿ ಚಿಕಿತ್ಸೆ ಪಡೆದುಕೊಳ್ಳಲು ದಾಖಲಾಗಿದ್ದೇನೆ. ಪೊಲೀಸರ ದೌರ್ಜನ್ಯದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಪತ್ನಿ ಎದುರಿಗೆ ದನಕ್ಕೆ ಬಡಿದಂತೆ ಬಡಿದಿದ್ದಾರೆ. ಇದರಿಂದ ಮನನೊಂದು ಸಾಯಲು ಸಿದ್ಧನಾಗಿ ಹಗ್ಗದೊಂದಿಗೆ ಮನೆಯಿಂದ ಹೊರ ಬಂದಿದ್ದೇನೆ. ಆದರೆ ಅಣ್ಣ ಮತ್ತು ಅತ್ತಿಗೆ ನನಗೆ ಸಮಾಧಾನಗೊಳಿಸಿದ್ದರಿಂದ ಸಾಯುವ ನಿರ್ಧಾರ ಬದಲಿಸಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಚಾಲಕನ ಪತ್ನಿ ಸವಿತಾ ಅವರು ಪ್ರತಿಕ್ರಿಯೆ ನೀಡಿದ್ದು ಮಗನ ವಿಚಾರವಾಗಿ ಗಂಡನೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರ ಬಂದಿದ್ದಾಗ ಬಸ್ ನಿಲ್ದಾಣದ ಬಳಿ ಇದ್ದ ನನಗೆ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ನನ್ನಿಂದ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಅವರಾಗಿಯೇ ಘಟನೆ ಕುರಿತು ಮಾಹಿತಿ ಕೇಳಿ ಬಿಳಿ ಹಾಳೆಯಲ್ಲಿ ಬರೆದುಕೊಂಡು ನನ್ನಿಂದ ಸಹಿ ಮಾಡಿಸಿಕೊಂಡು ಬಳಿಕ ನನ್ನ ಗಂಡನನ್ನು ಕರೆಸಿ ನನ್ನೆದುರಲ್ಲೇ ಮನಸೋ ಇಚ್ಛೆ ಥಳಿಸಿದ್ದಾರೆ. ಪೊಲೀಸ್‌ರಿಂದ ಹಲ್ಲೆಗೊಳಗಾಗಿ ನನ್ನ ಪತಿ ಮನನೊಂದಿದ್ದಾರೆ ಎಂದು ತಿಳಿಸಿದರು.