ಅಫಜಲ್ಪುರ: ಕೃಷಿಕರಿಂದ ಸಂಭ್ರಮದಿಂದ ಎಳ್ಳ ಅಮಾವಾಸ್ಯೆ ಆಚರಣೆ

KannadaprabhaNewsNetwork |  
Published : Jan 12, 2024, 01:46 AM IST
ಅಫಜಲ್ಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಮಹೇಶ ಅಂಜುಟಗಿ ಅವರ ಹೊಲದಲ್ಲಿ ಎಳ್ಳು ಅಮವಾಸ್ಯೆಯ ಪ್ರಯುಕ್ತ ಸಾಮೂಹಿಕ ಭೋಜನ ಮಾಡುತ್ತಿರುವುದು.  | Kannada Prabha

ಸಾರಾಂಶ

ಚರಗ ಚೆಲ್ಲಿ ಭೂಮಿ ತಾಯಿಗೆ ನಮಿಸಿ ಉತ್ತಮ ಫಸಲು ನೀಡು ತಾಯಿ ಎಂದು ಭೂತಾಯಿಗೆ ರೈತರಿಂದ ವಿಶೇಷ ಪೂಜೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ರೈತರ ಸಂಭ್ರಮದ ಹಬ್ಬವಾಗಿರುವ ಎಳ್ಳ ಅಮಾವಾಸ್ಯೆಯನ್ನು ಅಫಜಲ್ಪುರ ತಾಲೂಕಿನಾದ್ಯಂತ ಸಂಭ್ರಮದಿಂದ ರೈತಾಪಿ ವರ್ಗದವರು ಆಚರಿಸಿದರು.

ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗುವ ಜೋಳ, ಕಡಲೆ ಬೆಳೆಗಳಲ್ಲಿ ಚರಗ ಚೆಲ್ಲಿ ಭೂಮಿ ತಾಯಿಗೆ ನಮಿಸಿದ ರೈತರು ಉತ್ತಮ ಫಸಲು ನೀಡು ತಾಯಿ ಎಂದು ಭೂತಾಯಿಗೆ ಬೇಡಿದರು.

ಬಳಿಕ ಮನೆಯಲ್ಲಿ ಮಾಡಿಕೊಂಡು ಬಂದಿದ್ದ ವಿಶೇಷ ಖಾದ್ಯ ಭಜ್ಜಿ, ಕಡುಬು, ಸೆಂಗಾ ಹೋಳಿಗೆ, ಎಣ್ಣೆಗಾಯಿ, ಎಳ್ಳು ಹಚ್ಚಿದ ಸಜ್ಜಿ, ಜೋಳದ ರೊಟ್ಟಿ, ಬಗೆ ಬಗೆಯ ಚಟ್ನಿ ಪುಡಿಗಳಿರುವ ವಿಶೇಷ ಖಾದ್ಯವನ್ನು ಬಂಧು ಬಾಂಧವರೆಲ್ಲರೂ ಕೂಡಿಕೊಂಡು ಸಾಮೂಹಿಕ ಭೋಜನ ಸವಿದರು.

ಎಳ್ಳಮಾವಾಸ್ಯೆ ಕುರಿತು ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳು ಹಾಗೂ ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಎಳ್ಳಮಾವಾಸ್ಯೆ ರೈತರ ಹಬ್ಬವೇ ಆಗಿದ್ದರೂ ಕೂಡ ಎಲ್ಲರೂ ಸಂಭ್ರಮಿಸುವ, ಕುಟುಂಬದವರು, ಬಂಧು ಬಾಂಧವರು, ಗೆಳೆಯರೆಲ್ಲರೂ ಒಂದಾಗಿ ಆಚರಿಸುವ ಅರ್ಥಪೂರ್ಣ ಹಬ್ಬವಾಗಿದೆ. ಹಬ್ಬದ ನಿಮಿತ್ತ ಹೊಲಗಳಿಗೆ ಹೋಗುವ ಎಲ್ಲರೂ ಒಂದಾಗಿ ಭೂತಾಯಿಗೆ ನಮಿಸಿ ಎಲ್ಲರೂ ಒಟ್ಟಾಗಿ ಕುಳಿತು ಸಾಮೂಹಿ ಭೋಜನ ಮಾಡುತ್ತಾರೆ.

ಪರಸ್ಪರ ಪ್ರೀತಿ ಹಂಚಿಕೊಳ್ಳುತ್ತಾರೆ. ಇಂತಹ ಅರ್ಥಪೂರ್ಣ ಆಚರಣೆಗಳು ಸಿಗುವುದು ನಮ್ಮಲ್ಲಿ ಮಾತ್ರ. ನಮ್ಮ ಪೂರ್ವಜರು ಇಂತಹ ಒಗ್ಗೂಡೂವ ಮತ್ತು ಅರ್ಥಪೂರ್ಣ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಉತ್ತಮ ಮಳೆಯಾಗದೆ ಎಲ್ಲಾ ಬೆಳೆಗಳು ಹಾಳಾಗಿ ರೈತರ ಮೊಗದಲ್ಲಿ ಮಂದಹಾಸ ಮಾಯವಾಗಿದೆ. ಆದರೂ ಭೂಮಿ ತಾಯಿ ಮತ್ತು ಪ್ರಕೃತಿಯ ಮೇಲೆ ಮುನಿಸಿಕೊಳ್ಳದ ರೈತ ಮುಂದಿನ ವರ್ಷವಾದರೂ ಮುನಿಯದೆ ಮಳೆ, ಬೆಳೆ ಕೊಡು ತಾಯಿ ಎಂದು ಭಕ್ತಿಯಿಂದ ನಮಿಸಿದ್ದಾನೆ.

ರೈತನ ಮೊರೆ, ದನಕರುಗಳ ಮುಖ ನೋಡಿದ ಭಗವಂತ ಬರುವ ವರ್ಷ ಉತ್ತಮ ಮಳೆ, ಉತ್ತಮ ಫಸಲು ನೀಡಲಿದ್ದಾನೆ. ಆದರೆ ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ಕೊಡುವ ಕೆಲಸ ಸರ್ಕಾರಗಳು ಮಾಡಿದರೆ ರೈತರು ಇನ್ನಷ್ಟು ಹಿರಿ ಹಿರಿ ಹಿಗ್ಗುವರು ಎಂದ ಅವರು ಹಳ್ಳಿ ಬಿಟ್ಟು ನಗರ ಸೇರಿದವರೆಲ್ಲ ಇಂತಹ ಹಬ್ಬ ಹರಿದಿನಗಳಲ್ಲಿ ಹಳ್ಳಿಗೆ ಬಂದು ಹಬ್ಬ ಹರಿದಿನಗಳ ಮಹತ್ವ ತಿಳಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ