ಕನ್ನಡಪ್ರಭ ವಾರ್ತೆ ವಿಜಯಪುರ: ಹಸರೀಕರಣ, ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿ.22ರಂದು ನಗರದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟ-2024 ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದರು.
ಪರಿಸರ ಹಾಗೂ ಪಾರಂಪರಿಕ ಸ್ಮಾರಕಗಳ ರಕ್ಷಣೆ ಜಾಗೃತಿ ಹಾಗೂ ಜಲ, ವೃಕ್ಷ, ಶಿಕ್ಷಣ ಎಂಬ ಧ್ಯೇಯ ವಾಕ್ಯದೊಂದಿಗೆ ಹಸಿರು ಪರಿಸರ ಬೆಳೆಸುವ ಜೊತೆಗೆ ಅರಣ್ಯವನ್ನು ಕಾಪಾಡುವ ವೃಕ್ಷೋತ್ಥಾನ ಪಾರಂಪರಿಕ ಓಟದಲ್ಲಿ ಅಂದಾಜು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ವೃಕ್ಷೋತ್ಥಾನದಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ, ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸಲು ಹಾಗೂ ಶತಮಾನದ ಸಂತರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗೌರವಾರ್ಥ ಆಯೋಜಿಸಲಾಗಿರುವ ವಿಜಯಪುರ ವೃಕ್ಷೋತ್ಥಾನ ಹೆರಿಟೇಜ್ ರನ್-2024 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಈ ಪಾರಂಪರಿಕ ಓಟ ಅಭಿಯಾನ ಕಳೆದ 2016 ರಿಂದ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿಯ ವರೆಗೆ ಕೋಟಿ ವೃಕ್ಷ ಅಭಿಯಾನವನ್ನು ಹಮ್ಮಿಕೊಂಡು 1.50 ಕೋಟಿ ಸಸಿಗಳನ್ನು ಬೆಳೆಸುವುದು, ರಕ್ಷಾ ಬಂಧನದ ದಿನ ವೃಕ್ಷಬಂಧನ, ಹುಟ್ಟು ಹಬ್ಬದ ದಿನ ಗಿಡವನ್ನು ದಾನವಾಗಿ ನೀಡುವುದು, ಅಧಿಕಾರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹೂಗುಚ್ಚ, ಶಾಲುಗಳನ್ನು ನೀಡಿ ಅಭಿನಂದಿಸುವ ಬದಲಿಗೆ ಒಂದೊಂದು ಸಸಿಗಳನ್ನು ನೀಡುವ ಮೂಲಕ ಉತ್ತೇಜನ ಕಾರ್ಯ ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟದ-2024 ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ.ವಿಜಯಕುಮಾರ ಅಜೂರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.