15 ವರ್ಷಗಳ ನಂತರ ಕೂಡ್ಲಿಗಿಯಲ್ಲಿ ಊರಮ್ಮ ಜಾತ್ರೆಯ ಸಡಗರ

KannadaprabhaNewsNetwork | Published : May 21, 2025 12:37 AM
ಪಾಳೇಗಾರರ ಕಾಲದಲ್ಲಿ ಪಟ್ಟಣದ ಅಧಿದೇವ ಶ್ರೀ ಕೊತ್ತಲ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಊರಮ್ಮದೇವಿ ದೇವಸ್ಥಾನ ನಿರ್ಮಾಣವಾಯಿತೆಂದು ಸ್ಥಳೀಯರು ಹೇಳುತ್ತಾರೆ.
Follow Us

ವಿಜಯನಗರ ಸಾಮ್ರಾಜ್ಯಕ್ಕೂ ಮುಂಚೆ ಬೇಡರಹಟ್ಟಿಯಾಗಿದ್ದ ಕೂಡ್ಲಿಗಿ

₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಶ್ರೀ ಊರಮ್ಮ ದೇವಸ್ಥಾನ ನೋಡಲು ಸುಂದರಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಪಾಳೇಗಾರರ ಕಾಲದಲ್ಲಿ ಪಟ್ಟಣದ ಅಧಿದೇವ ಶ್ರೀ ಕೊತ್ತಲ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಊರಮ್ಮದೇವಿ ದೇವಸ್ಥಾನ ನಿರ್ಮಾಣವಾಯಿತೆಂದು ಸ್ಥಳೀಯರು ಹೇಳುತ್ತಾರೆ. ಇದಲ್ಲದೇ ಪಾಳೇಗಾರರ ಚರಿತ್ರೆಯಲ್ಲಿಯೂ ಕೂಡ್ಲಿಗಿಯ ಈ ದೇವಸ್ಥಾನಗಳು ನಿರ್ಮಾಣವಾಗಿದ್ದನ್ನು ದಾಖಲಿಸಲಾಗಿದೆ. ಶ್ರೀ ಕೊತ್ತಲ ಆಂಜನೇಯ ಅಣ್ಣ, ಶ್ರೀ ಊರಮ್ಮ ಆತನ ತಂಗಿ ಎನ್ನುವ ನಂಬಿಕೆ ಇಲ್ಲಿಯ ಜನತೆಯದ್ದು. ಕೂಡ್ಲಿಗಿಯ ಊರಮ್ಮ ಬಳ್ಳಾರಿಯ ದುರುಗಮ್ಮನ ಕಡೆಯಿಂದ ಬಂದವಳು ಎನ್ನುವ ನಂಬಿಕೆ ಇಲ್ಲಿಯ ಭಕ್ತರದ್ದು. ಕೂಡ್ಲಿಗಿಯ ಶ್ರೀ ಊರಮ್ಮ ಆಚಾರ್ಯರ ಮನೆಮಗಳಾಗಿದ್ದರಿಂದ ಇಂದಿಗೂ ಆಚಾರ್ಯರೇ ಊರಮ್ಮನ ಪೂಜೆ ಮಾಡುತ್ತಾ ಬಂದಿದ್ದಾರೆ. ಬಣಕಾರ ಮನೆಯ ಸೊಸೆಯಾಗಿದ್ದಾಳೆ. ಈ ಮೂಲಕ ಊರಿನ ಅಧಿದೇವತೆಯಾಗಿ ಕೂಡ್ಲಿಗಿಯಲ್ಲಿ ನೆಲೆನಿಂತು ಎಲ್ಲ ಭಕ್ತರನ್ನು ಪೊರೆಯುತ್ತಿದ್ದಾಳೆ.ಹಂತ ಹಂತವಾಗಿ ಹಟ್ಟಿಯಂತಿದ್ದ ಕೂಡ್ಲಿಗಿ ಪಟ್ಟಣವಾಗಿ ಬೆಳೆದಿದ್ದು ಬ್ರಿಟಿಷರ ಕಾಲದಲ್ಲಿ ಎಂದೇ ಹೇಳಬಹುದು. ಕೂಡ್ಲಿಗಿ ತಾಲೂಕು ಆಡಳಿತ ಕೇಂದ್ರವಾಗಿದ್ದರಿಂದ ಇಂದಿಗೂ ಐತಿಹಾಸಿಕ ತಾಲೂಕಾಗಿದೆ. ಸ್ವಾತಂತ್ರ್ಯನಂತರ ಈ ಊರಿನ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದ್ದರಿಂದ ಕೂಡ್ಲಿಗಿ ಪಟ್ಟಣವಾಗಿ ಈಗ ನಗರವಾಗುವ ಹಂತಕ್ಕೆ ಬೆಳೆದಿದೆ. ಬೆಳೆಯುತ್ತಲೇ ಇದೆ. ನೂತನ ದೇವಸ್ಥಾನ:ಇತ್ತೀಚೆಗೆ ಅಂದಾಜು ₹3 ಕೋಟಿ ವೆಚ್ಚದಲ್ಲಿ ಕೂಡ್ಲಿಗಿಯ ಶ್ರೀ ಊರಮ್ಮ ದೇವಸ್ಥಾನ ಸಮಿತಿ, ಆಯಾಗಾರರು, ಗ್ರಾಮಸ್ಥರು ಎಲ್ಲರೂ ಸೇರಿ ಶ್ರೀ ಊರಮ್ಮನ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಭಕ್ತರಿಂದ ದೇಣಿಗೆ ಪಡೆದು ನೂತನ ದೇವಾಲಯ ನಿರ್ಮಿಸುವಾಗ ದೇವಸ್ಥಾನಕ್ಕೆ ಜಾಗ ಚಿಕ್ಕದಾಗುತ್ತದೆ ಎಂದು ತಿಳಿದು ದೇವಸ್ಥಾನದ ಪಕ್ಕದಲ್ಲಿದ್ದ 5 ವಾಸಮಾಡುವ ಮನೆಗಳನ್ನು ದೇವಸ್ಥಾನಕ್ಕಾಗಿ ₹38.50 ಲಕ್ಷ ನೀಡಿ ಖರೀದಿ ಮಾಡಿದರು. ಈ ಮೂಲಕ ಊರಮ್ಮನ ಪುಟ್ಟ ದೇವಸ್ಥಾನ ವಿಶಾಲ ದೇವಾಲಯವಾಗಿ ಹೊಸ ಸ್ಪರ್ಶ ಪಡೆಯಿತು. 2024ರ ನವೆಂಬರ್ 8, 9ರಂದು ನೂತನ ದೇವಸ್ಥಾನ ಉದ್ಘಾಟನೆಯನ್ನು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಊರಿನ ಸ್ವಾಮಿಗಳು, ಆಯಾಗಾರರ ನೇತೖತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಊರಿನ ನೂತನ ಕರಿಗಲ್ಲು ಸ್ಥಾಪನೆ ನಡೆಯಿತು. 830ಕ್ಕೂ ದಾನಿಗಳು ನೂತನ ದೇವಸ್ಥಾನ ನಿರ್ಮಾಣಕ್ಕೆ ದಾನ ನೀಡಿದ್ದು ಇನ್ನೂ ದಾನ ನೀಡುವವರ ಸಂಖ್ಯೆ ಬೆಳೆಯುತ್ತಲೇ ಇದೆ.2019 ರಲ್ಲಿ ಜಾತ್ರೆ ನಡೆಯಬೇಕಿತ್ತು, ಆದರೆ ಕೊರೋನಾ ಮಹಾಮಾರಿ ಜಗತ್ತಿನಲ್ಲಿ ಹಬ್ಬಿದ್ದರಿಂದ ಊರವರು ಜಾತ್ರೆಯನ್ನು ರದ್ದು ಮಾಡಿದ್ದರು. 9 ವರ್ಷಕ್ಕೊಮ್ಮೆ, 21 ವರ್ಷಕ್ಕೊಮ್ಮೆ ಶ್ರೀ ಊರಮ್ಮ ಜಾತ್ರೆ ಮಾಡುತ್ತಾರೆ. ಆದರೆ ಕೊರೋನಾದಿಂದ ರದ್ದಾಗಿದ್ದರಿಂದ ಈಗ 15 ವರ್ಷಗಳ ನಂತರ ಊರಮ್ಮನ ಜಾತ್ರೆಗೆ ಶುಕ್ರದೆಸೆ ಬಂದಿದೆ. ಇಡೀ ಊರಿನ ಜನತೆ ಇತಿಹಾಸದಲ್ಲಿಯೇ ಇಷ್ಟೊಂದು ಅದ್ದೂರಿಯಾಗಿ ಜಾತ್ರೆ ಮಾಡುವುದು ಇದೇ ಮೊದಲು. ಮೇ 20ರಿಂದ ಜಾತ್ರೆ ಸಂಭ್ರಮದಿಂದ ಆರಂಭಗೊಂಡಿದೆ. ಒಂದು ವಾರ ಜಾತ್ರೋತ್ಸದ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.ತವರುಮನೆ ಅಮರದೇವರಗುಡ್ಡ:ಶ್ರೀ ಊರಮ್ಮನ ತವರುಮನೆ ಕೂಡ್ಲಿಗಿ ಪಕ್ಕದ ಅಮರದೇವರಗುಡ್ಡ ಗ್ರಾಮವಾಗಿದ್ದು ಶ್ರಾವಣ ಮಾಸದ 3ನೇ ಮಂಗಳವಾರ ಸಂಜೆ ಇಲ್ಲಿಯ ಭಕ್ತರು ಊರಮ್ಮನ ಉತ್ಸವಮೂರ್ತಿಯನ್ನು ಅಮರದೇವರಗುಡ್ಡಕ್ಕೆ ಸಕಲ ವಾದ್ಯಗಳೊಂದಿಗೆ ಕರೆದುಕೊಂಡು ಹೋಗಿ ರಾತ್ರಿ ಪುನಃ ವಾಪಸ್ಸು ಕೂಡ್ಲಿಗಿಗೆ ಬರುತ್ತಾಳೆ. ಅಮರದೇವರಗುಡ್ಡ ಗ್ರಾಮದ ಪ್ರತಿಮನೆಯವರು ನಮ್ಮೂರಿನ ಮನೆಮಗಳು ಕೂಡ್ಲಿಗಿಯ ಊರಮ್ಮ ಎಂದು ಸಂತಸದಿಂದ ತವರುಮನೆ ಉಡುಗೊರೆ ಸಾಮಾನುಗಳನ್ನು ಶ್ರೀ ಊರಮ್ಮಗೆ ಅರ್ಪಿಸುತ್ತಾರೆ. ಇಡೀ ಅಮರದೇವರಗುಡ್ಡ ಗ್ರಾಮ ಅಂದು ಧನ್ಯತಾಭಾವ ಮೆರೆಯುತ್ತದೆ. ಶ್ರಾವಣಮಾಸದ 2ನೇ ಮಂಗಳವಾರ ಕೂಡ್ಲಿಗಿ ದೈವಸ್ಥರು ಶ್ರೀ ಊರಮ್ಮನ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಪುಷ್ಕರಣಿಗೆ ಹೋಗಿ ಗಂಗೆಪೂಜೆ ನೆರೇವರಿಸುತ್ತಾರೆ, ಈಗೇ ಊರಮ್ಮನ ಉತ್ಸವ, ಜಾತ್ರೆ ಬಂತೆಂದರೆ ಇಲ್ಲಿಯ ಜನತೆಗೆ ಸಂತಸ ಮನೆಮಾಡುತ್ತದೆ.