ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಬ್ರಾಹ್ಮಣಿ ಸ್ಟೀಲ್ಸ್‌ಗೆ ಮಂಜೂರಾಗಿದ್ದ ಸುಮಾರು 14 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು 18 ವರ್ಷಗಳ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕ ಆಂಧ್ರಪ್ರದೇಶ ಸರ್ಕಾರ ಮತ್ತೆ ತನ್ನ ವಶಕ್ಕೆ ಪಡೆದಿದೆ. ಉದ್ದೇಶಿತ ಕೈಗಾರಿಕಾ ಯೋಜನೆಗಳನ್ನು ಜಾರಿಗೊಳಿಸದೇ ಭೂಮಿಯನ್ನು ಬಳಕೆಯಾಗದಂತೆ ಉಳಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 5 ಸಾವಿರ ಕೋಟಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಜಮ್ಮಲಮಡುಗು ತಹಶೀಲ್ದಾರ್‌ಗೆ 48 ಗಂಟೆಗಳ ಗಡುವು ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಜೊತೆಗೆ ಭೂಮಿಗೆ ಸಂಬಂಧಿಸಿದ ಯಾವುದೇ ನೋಂದಣಿ ಅಥವಾ ಗುತ್ತಿಗೆ ವ್ಯವಹಾರ ನಡೆಸದಂತೆ ಜಿಲ್ಲಾ ನೋಂದಣಾಧಿಕಾರಿಗೆ ಸೂಚನೆ ನೀಡಲಾಗಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಅವಧಿಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿತ್ತು. ಆದರೆ ಅವರ ನಿಧನ, ಬಳಿಕ ಕರ್ನಾಟಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳು ಹಾಗೂ ಕಾನೂನು ವಿವಾದಗಳಿಂದ ಯೋಜನೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಸರ್ಕಾರ ಭೂಮಿಯನ್ನು ಮರಳಿ ಸ್ವಾಧೀನಪಡಿಸಿ ಕೊಂಡಿರುವುದರಿಂದ ಭವಿಷ್ಯದಲ್ಲಿ ಹೊಸ ಕೈಗಾರಿಕಾ ಯೋಜನೆಗಳಿಗೆ ಅದನ್ನು ಬಳಸುವ ಸಾಧ್ಯತೆ ಮೂಡಿದೆ.ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ ಮತ್ತು ಭೂ ಹಂಚಿಕೆ ಸಂಬಂಧ ನಾನು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. 18 ವರ್ಷಗಳ ಕಾನೂನು ಹೋರಾಟದ ಬಳಿಕ ಸರ್ಕಾರ ಭೂಮಿಯನ್ನು ಮರಳಿ ವಶಕ್ಕೆ ಪಡೆದಿರುವುದು ನ್ಯಾಯದ ಗೆಲುವಾಗಿದೆ ಎನ್ನುತ್ತಾರೆ ಅಕ್ರಮ ಗಣಿಗಾರಿಕೆ ವಿರೋಧಿ ಹೋರಾಟಗಾರ ಟಪಾಲ್ ಗಣೇಶ್.